Connect with us

Latest

ಪತಿ ಬೈದಿದ್ದಕ್ಕೆ ಮಾಂಗಲ್ಯ ಸರವನ್ನೇ ಮಾರಿ ಶೌಚಾಲಯ ಕಟ್ಟಿಸಿದ ಮಹಿಳೆ

Published

on

ಪಾಟ್ನಾ: ಸುಮಾರು 15 ಕೋಟಿ ರೂಪಾಯಿಯ ಶೌಚಾಲಯದ ಹಗರಣವು ಬಿಹಾರ ರಾಜ್ಯದ ರಾಜಕಾರಣವನ್ನು ತಲೆತಗ್ಗಿಸುವಂತೆ ಮಾಡಿದೆ. ಆದರೆ ಇದಕ್ಕೆ ಸವಾಲು ಎಂಬಂತೆ ಪಾಟ್ನಾ ಸಮೀಪದ ಗ್ರಾಮವೊಂದರಲ್ಲಿ ದಲಿತ ಮಹಿಳೆಯೊಬ್ಬರು ತಮ್ಮ ಮಂಗಳ ಸೂತ್ರವನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣದಿಂದ ಒಂದು ಶೌಚಾಲಯವನ್ನು ನಿರ್ಮಿಸಿದ್ದಾರೆ.

ಮೂಲತಃ ಫತುಹಾ ಬ್ಲಾಕ್ ನ ವರುನಾ ಗ್ರಾಮದ ನಿವಾಸಿ ರುಂಕಿ ದೇವಿ ಅವರು ತಮ್ಮ ಪತಿ ಪರಶುರಾಮ್ ಪಾಸ್ವಾನ್ ಬಳಿ ಮನೆಯಲ್ಲಿ ಶೌಚಾಲಯ ಕಟ್ಟಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ ಪರುಶುರಾಮ್ ಮಾತ್ರ ಪತ್ನಿಯ ಮಾತಿಗೆ ತಲೆಕೆಡಿಸಿಕೊಳ್ಳದೆ ಬದಲಾಗಿ ಬೈದು ಕಳುಹಿಸಿದ್ದಾರೆ.

ಸರ್ಕಾರ ಪ್ರತಿ ಗ್ರಾಮವನ್ನು ಬಯಲು ಮುಕ್ತ ಶೌಚಾಲಯ ಮಾಡಬೇಕೆನ್ನುವ ಕಾರ್ಯಕ್ಕೆ ಪತಿ ಆಸಕ್ತಿವನ್ನು ತೋರಿಲ್ಲ. ಇದರಿಂದ ಅವರು ಮಾಂಗಲ್ಯ ಸರವನ್ನು ಮಾರಾಟ ಮಾಡಿದ್ದಾರೆ. ಮಾರಾಟದಿಂದ ಬಂದಿದ್ದು ಕೇವಲ 9 ಸಾವಿರ ರೂ. ಮಾತ್ರ. ಈ ಹಣದಿಂದ ಶೌಚಾಲಯ ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿದು ಬಳಿಕ ತಮ್ಮ ಕಿವಿಯೋಲೆಗಳನ್ನೂ ಸಹ ಮಾರಿದ್ದಾರೆ. ಅದರಿಂದ ಬಂದ 4 ಸಾವಿರವನ್ನೂ ಒಟ್ಟಾಗಿ ಸೇರಿಸಿ ಶೌಚಾಲಯವನ್ನು ನಿರ್ಮಿಸಿದ್ದಾರೆ.

“ನಾನು ಮನೆಗೆ ಇಟ್ಟಿಗೆ, ಸಿಮೆಂಟ್ ಅನ್ನು ತಂದಾಗ ನನ್ನ ಪತಿ ಗೊಂದಲಕ್ಕೀಡಾದರು. ಮೊದಲು ನಾನು ಮಾಂಗಲ್ಯವನ್ನು ಮಾರಿ ಶೌಚಾಲಯ ಕಟ್ಟಿಸುತ್ತೇನೆ ಎಂದಾಗ ಅವರು ಕೋಪ ಮಾಡಿಕೊಂಡಿದ್ದರು. ಬಳಿಕ ಅವರೇ ನನ್ನ ಕೆಲಸಕ್ಕೆ ಸಹಾಯ ಮಾಡಿದರು” ಎಂದು ಫತುಹಾ ಹೇಳಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಸಹ ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಮಹಿಳೆಯಿಂದ ಇಂದೊಂದು ಆದರ್ಶವಾದ ಕಾರ್ಯವಾಗಿದೆ. ಇದು ಸಮಾಜಕ್ಕೆ ಒಂದು ಧನಾತ್ಮಕ ಸಂದೇಶವನ್ನು ಸಾರುತ್ತದೆ ಎಂದು ಬಿ.ಡಿ.ಒ ರಾಕೇಶ್ ಕುಮಾರ್ ಅವರು ಹೇಳಿದರು. ಮಾಂಗಲ್ಯ ಸರ, ಕಿವಿಯೋಲೆ ಮಾರಾಟ ಮಾಡಿ ಶೌಚಾಲಯ ನಿರ್ಮಿಸಿದ ಮಹಿಳೆ ಸ್ಥಳೀಯ ನಿವಾಸಿಗಳಿಗೆ ಈಗ ಮಾದರಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *