ತುಕಾಲಿ ಸಂತೋಷ್ (Tukali Santu) ಈ ಹೆಸರು ಕೇಳಿದರೆ ಸಾಕು ಒಮ್ಮೆ ಹುಬ್ಬು ಮೇಲೇರುತ್ತದೆ. ಮರುಗಳಿಗೆ ತುಟಿಗಳಲ್ಲಿ ನಗು ಮೂಡುತ್ತದೆ. ಹುಬ್ಬೇರಿಸುವ ಅಚ್ಚರಿ, ನಗುಮೂಡಿಸುವ ವೈಖರಿ ಇದು ತುಕಾಲಿ ಸಂತೋಷ್ ಬಿಗ್‌ಬಾಸ್ (Bigg Boss Kannada) ಸೀಸನ್ 10ನಲ್ಲಿ ಮೂಡಿಸಿರುವ ಹೆಜ್ಜೆಗುರುತಿಗೆ ಪುರಾವೆ. ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ತುಕಾಲಿ ಸಂತೋಷ್ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಇದ್ದಷ್ಟೂ ದಿನ ಎಲ್ಲರನ್ನೂ ನಗಿಸುತ್ತಲೇ ಇದ್ದ ತುಕಾಲಿ, ನಗುನಗುತ್ತಲೇ ಹೊರಗೆ ಬಂದಿದ್ದಾರೆ. ತಮ್ಮ ಸಹಸ್ಪರ್ಧಿಗಳಿಗೆ ಶುಭಾಶಯ ಕೋರಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಹೊರಗೆ ಬಂದ ತುಕಾಲಿ ಸಂತೋಷ್ ಅವರ ಜರ್ನಿಯೂ ಅಷ್ಟೇ ಮನರಂಜನಾತ್ಮಕವಾಗಿತ್ತು. ಅದನ್ನು ಕಟ್ಟಿಕೊಡುವ ಪ್ರಯತ್ನವನ್ನು ಜಿಯೊಸಿನಿಮಾ ಮಾಡುತ್ತಿದೆ.
Advertisement
‘ಈ ಸಲ ಎಂಟರ್‍ಟೈನ್ಮೆಂಟ್ ಕಡಿಮೆ ಇದೆ’ ಎಂಬ ಕೆಲವರ ಗೊಣಗಾಟಕ್ಕೆ ಉತ್ತರವಾಗಿ ತುಕಾಲಿ ಸಂತೋಷ್ ಮನೆಯೊಳಗಿದ್ದರು. ಅಗ್ರೆಶನ್‌ನಲ್ಲಿ ಆಡಲಾಗದ, ಸ್ಪೋರ್ಟ್ಸ್ ಹಿನ್ನೆಲೆ ಇಲ್ಲದ ಅವರು ಮನೆಯೊಳಗೆ ವಾರದಿಂದ ವಾರಕ್ಕೆ ತಮ್ಮ ಜಾಗವನ್ನು ವಿಸ್ತರಿಸುತ್ತ ಬಂದಿದ್ದೊಂದು ಕುತೂಹಲಕಾರಿ ವಿದ್ಯಮಾನ. ಅದೂ ಮನೆಯೊಳಗೆ ಜನರು ಕಡಿಮೆಯಾಗುತ್ತ ಬಂದಷ್ಟೂ ತುಕಾಲಿ ಸಂತೋಷ್ ಪ್ರಭಾವ ಹೆಚ್ಚುತ್ತಲೇ ಹೋಗಿದ್ದು ಇನ್ನೊಂದು ಕುತೂಹಲಕಾರಿ ಬೆಳವಣಿಗೆ. ಎಲ್ಲರೊಳಗೆ ಒಂದಾಗುತ್ತ, ಎಲ್ಲರಿಗೂ ಪಿನ್ನು ಚುಚ್ಚುತ್ತ ತಮ್ಮ ಪಯಣವನ್ನು ಮುಂದುವರಿಸಿಕೊಂಡು ಬಂದಿರುವ ತುಕಾಲಿ ಅವರ ಜರ್ನಿಯ ಕೆಲವು ಮುಖ್ಯಘಟ್ಟಗಳ ನೆನಪು ಇಲ್ಲಿವೆ.
Advertisement
Advertisement
ಮಾತಿನಲ್ಲೇ ಮನೆಯ ಕಟ್ಟುವ ಮಲ್ಲ
Advertisement
ತುಕಾಲಿ ಸಂತೋಷ್ ಅವರು ಮೈಕಟ್ಟಿನಲ್ಲಂತೂ ‘ಮಲ್ಲ’ನಲ್ಲ. ಆದರೆ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೆಯೇ ಮಾತಲ್ಲೇ ಮಹಡಿಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲವು ದಿನಗಳಲ್ಲಿಯೇ ಮನೆಮಂದಿಗೆಲ್ಲ ಪರಿಚಯವಾಗಿತ್ತು. ‘ನನ್ನ ತಾಯಿ ಗರ್ಭಿಣಿಯಾಗಿದ್ದಾಗ, ನಿನ್ನ ಹೊಟ್ಟೆಯಲ್ಲಿ ಮಹಾತ್ಮ ಹುಟ್ತಾನೆ ಅಂತ ಹೇಳಿದ್ರಂತೆ ದೊಡ್ಡವರೊಬ್ಬರು. ನಾನು ಹುಟ್ಟುವಾಗ ಗುಡುಗು ಸಿಡಿಲು ಎಲ್ಲ ಇತ್ತು. ಮಳೆ ಬರ್ತಿತ್ತು. ಆಗ ನಾನು ಹುಟ್ಟಿದೆ…’ ಎಂದು ತಮ್ಮ ಜನ್ಮವೃತ್ತಾಂತವನ್ನು ಅರುಹುತ್ತ ಹೋದ ಹಾಗೆ ಮನೆಯವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಅವರು ಕಾಗೆ ಹಾರಿಸುತ್ತಿದ್ದಾರೆ ಎಂದು ಗೊತ್ತಿದ್ದೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಬಿಗ್‌ಬಾಸ್ ಮನೆಯ ಸದಸ್ಯರು ಕಾದು ಕೂತಿರುತ್ತಿದ್ದದ್ದು ಸುಳ್ಳಲ್ಲ.
ಆದರೆ ಆರಂಭಿಕ ಹಂತದಲ್ಲಿ ತುಕಾಲಿ ಅವರು ಮನೆಯ ಸದಸ್ಯರನ್ನು ನಗಿಸಲು ಅನುಸರಿದ ದಾರಿ ಟೀಕೆಗೂ ಒಳಗಾಗಿತ್ತು. ಅವರು ಪ್ರತಾಪ್ ಬಗ್ಗೆ ಆಡಿದ ಮಾತುಗಳು, ಮನೆಯ ಉಳಿದ ಸದಸ್ಯರ ಬಗ್ಗೆ ಆಡಿದ ಮಾತುಗಳ ಬಗ್ಗೆ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಭಾಗ್ಯಶ್ರೀ ಮತ್ತು ಸಿರಿ ಅವರನ್ನು ಮಿಮಿಕ್ ಮಾಡಿದ್ದಕ್ಕಾಗಿ ಸುದೀಪ್ ವಾರವಿಡೀ ತುಕಾಲಿ ಅವರ ಸೊಂಟಕ್ಕೆ ಹಗ್ಗ ಕಟ್ಟಿ ಅದರ ಎರಡುಬದಿಗಳಲ್ಲಿ ಸಿರಿ ಮತ್ತು ಭಾಗ್ಯಶ್ರೀ ಇರುವ ಶಿಕ್ಷೆ ಕೊಟ್ಟಿದ್ದರು. ಇಂಥ ಶಿಕ್ಷೆಯನ್ನು ತುಕಾಲಿ ಕಾಮಿಡಿ ಸೃಷ್ಟಿಗೇ ಬಳಸಿಕೊಂಡರು ಅನ್ನುವುದು ಬೇರೆ ಮಾತು.
‘ಅನ್ಯರನ್ನು ನೋಯಿಸಿ ಮತ್ಯಾರನ್ನೋ ನಗಿಸುವುದು ಹಾಸ್ಯನಟನ ಘನತೆಗೆ ತಕ್ಕುದಲ್ಲ’ ಎಂಬ ಕಿಚ್ಚನ ಮಾತುಗಳನ್ನು ತುಕಾಲಿ ಗಂಭೀರವಾಗಿಯೇ ತೆಗೆದುಕೊಂಡರು. ಆದರೆ ಮನೆಯ ಸದಸ್ಯರು ಮಾತ್ರ ‘ಅವರು ಉಳಿದವರನ್ನು ನೋಯಿಸಿ ಹಾಸ್ಯ ಮಾಡುತ್ತಾರೆ’ ಎಂದು ಆರೋಪಿಸುವುದನ್ನು ನಿಲ್ಲಿಸಲಿಲ್ಲ. ಇದರಿಂದ ತುಕಾಲಿ ಅವರು ಕೆಲಕಾಲ ಕುಗ್ಗಿದ್ದು, ಮಾತಾಡಲೇ ಹಿಂಜರಿಯುವಂತಾಗಿದ್ದು ಸುಳ್ಳಲ್ಲ.
ಕ್ಯಾಪ್ಟನ್ ಆಗುವ ಕನಸು
ಮನೆಯ ಕ್ಯಾಪ್ಟನ್ ಆಗಬೇಕು ಎಂಬುದು ಈ ಸೀಸನ್ ಉದ್ದಕ್ಕೂ ತುಕಾಲಿ ಸಂತೋಷ್ ಕಂಡಂತ ಕನಸು. ಆ ಕನಸು ಮೊಳೆತಿದ್ದು ಮೊದಲ ವಾರದಲ್ಲಿಯೇ. ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ನೇಹಿತ್ ಮತ್ತು ನಮ್ರತಾ ಅವರ ಜೊತೆಯಲ್ಲಿ ತುಕಾಲಿ ಕೂಡ ರೇಸ್‌ನಲ್ಲಿ ಇದ್ದರು. ತಿರುಗುವ ಚಕ್ರದ ಮೇಲೆ ಅತಿಹೆಚ್ಚು ಕಾಲ ನಿಲ್ಲುವ ಟಾಸ್ಕ್‌ನಲ್ಲಿ ಬರಿಗಾಲಿನಲ್ಲಿ ನಿಂತಿದ್ದ ತುಕಾಲಿ ಎಲ್ಲರಿಗಿಂತ ಮೊದಲೇ ಕೆಳಗಿಳಿದರು. ಮೊದಲ ವಾರದ ಸೋಲು ಕೊನೆಯ ಹಂತದವರೆಗೂ ಬೆನ್ನುಬಿಟ್ಟಿಲ್ಲ.
ಹಲವು ಸಲ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲುವಿನ ಹೊಸ್ತಿಲವರೆಗೂ ಹೋಗಿ ಬಂದಿದ್ದಾರೆ. ಆದರೆ ಗೆದ್ದು ಕ್ಯಾಪ್ಟನ್ ಆಗುವ ಕನಸು ಮಾತ್ರ ನನಸಾಗಿಲ್ಲ. ನಾಲ್ಕನೇ ವಾರದಲ್ಲಿ ಹಳ್ಳಿ ಮನೆ ಟಾಸ್ಕ್‌ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮ ಹಂತದವರೆಗೂ ತುಕಾಲಿ ಬಂದಿದ್ದರು. ಆಗ ಅವರು ಸಿರಿ ಮತ್ತು ವಿನಯ್ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಗಿತ್ತು. ಆಗ ಅವರು ಸಿರಿ ಅವರನ್ನು ಹೊರಗಿಟ್ಟು ವಿನಯ್ ಅವರನ್ನು ಆಯ್ದುಕೊಂಡರು. ವಿನಯ್ ವಿರುದ್ಧ ಸೋತರು. ಕೊನೆಗೂ ತುಕಾಲಿ ಸಂತೋಷ್ ಕ್ಯಾಪ್ಟನ್ ಆಗಲೇ ಇಲ್ಲ. ಆದರೆ ಅವರು ತಮ್ಮ ಆಸೆ ಈಡೇರಿಸಿಕೊಳ್ಳದೇ ಬಿಡಲೂ ಇಲ್ಲ. ಕಳೆದ ವಾರ ನಡುರಾತ್ರಿ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ರೂಮ್ ಹೊಕ್ಕು ಬೆಡ್ ಮೇಲೆ ಎರಡು ನಿಮಿಷ ಮಲಗಿ ಖುಷಿಪಟ್ಟರು