ಜಗತ್ತಿನ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada)… ಅನುಮಾನವೇ ಬೇಡ.. ಅತೀ ಹೆಚ್ಚು ಸೀಸನ್ ಮುಗಿಸಿದ, ಹೆಚ್ಚು ಭಾಷೆಗಳಲ್ಲಿ ತಯಾರಾದ, ಸುದೀರ್ಘ 24 ವರ್ಷಗಳ ಇತಿಹಾಸ ಹೊಂದಿರುವ ಈ ಕಾರ್ಯಕ್ರಮಕ್ಕೆ ತನ್ನದೇ ಆದ ವಿಶೇಷತೆ ಇದೆ. ಅಷ್ಟು ಸುಲಭವಾಗಿ ಈ ಕಾರ್ಯಕ್ರಮವನ್ನು ನಡೆಸುವುದು ಕಷ್ಟ ಕಷ್ಟ. ಕೋಟಿ ಕೋಟಿ ಹಣ ಬೇಡುವಂತಹ ಈ ಶೋ ಅತೀ ಶ್ರೀಮಂತ ಶೋಗಳಲ್ಲಿ ಒಂದಾಗಿದೆ.
ಹೌದು, ಈ ಕಾರ್ಯಕ್ರಮ ಮೊದಲು ಶುರುವಾಗಿದ್ದು, ಡಚ್ ಭಾಷೆಯಲ್ಲಿ. ಹೊರದೇಶದಲ್ಲಿ ‘ಬಿಗ್ ಬ್ರದರ್’ ಹೆಸರಿನಿಂದ ಪ್ರಾರಂಭವಾದ ಈ ಶ್ರೀಮಂತ ಕಾರ್ಯಕ್ರಮ, ನಾನಾ ದೇಶಗಳನ್ನು ಸುತ್ತಿ, ಭಾರತಕ್ಕೆ ಬರುತ್ತಿದ್ದಂತೆಯೇ ತನ್ನ ಹೆಸರಿನ್ನು ಬದಲಾಯಿಸಿಕೊಂಡಿತು. ‘ಬಿಗ್ ಬ್ರದರ್’ ಹೆಸರಿನಲ್ಲಿ 63 ಭಾಷೆಗಳಲ್ಲಿ ನಿರ್ಮಾಣವಾದರೆ, ಭಾರತದಲ್ಲಿ ‘ಬಿಗ್ ಬಾಸ್’ ಆಗಿ ಬದಲಾಯಿತು. ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ, ಮರಾಠಿ, ಕನ್ನಡ ಹೀಗೆ ಭಾರತದ ಏಳು ಭಾಷೆಗಳಲ್ಲಿ ಇದು ಪ್ರಸಾರವಾಗುತ್ತಿದೆ.
ಇಂಥದ್ದೊಂದು ಶೋನಲ್ಲಿ ಭಾಗಿಯಾಗಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ದೊಡ್ಮನೆ ಕದ ತಟ್ಟೋಕೆ ಕನಸು ಕಟ್ಟಿಕೊಂಡವರು ಹಲವರು. ಸೂಟ್ ಕೇಸ್ ರೆಡಿ ಮಾಡಿಕೊಂಡು ಕಾದವರು ಅನೇಕರು. ಆದರೆ, ಬಿಗ್ ಬಾಸ್ ಆಯ್ಕೆ (Selection) ಸುಲಭದ್ದಲ್ಲ, ಹಾಗಂತ ಕಠಿಣವೂ ಅಲ್ಲ. ಬಿಗ್ ಬಾಸ್ ಮನೆಗೆ ಹೋಗಲು ಅರ್ಹತೆಗಳೇನು? ನಾವೂ ಬಿಗ್ ಬಾಸ್ ಮನೆಗೆ ಹೋಗಬಹುದಾ? ಆಯ್ಕೆಯ ಪ್ರಕ್ರಿಯೆ ಹೇಗಿರುತ್ತದೆ? ಯಾರು ಆಯ್ಕೆ ಮಾಡುತ್ತಾರೆ? ಯಾರನ್ನು ಭೇಟಿ ಮಾಡಬೇಕು? ಇಂತಹ ಪ್ರಶ್ನೆಗಳು ಏಳುವುದು ಸಹಜ. ಬಿಗ್ ಬಾಸ್ ಮನೆಗೆ ಹೋಗಲು ನಮಗೂ ಅರ್ಹತೆ ಇದೆಯಾ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಕನ್ನಡದಲ್ಲಿ ಈವರೆಗೂ ಒಂಬತ್ತು ಸೀಸನ್ ಗಳು ಮುಗಿದಿವೆ. ಹತ್ತನೇ ಸೀಸನ್ ಇನ್ನಷ್ಟೇ ಶುರುವಾಗಬೇಕಿದೆ. ಬಹುತೇಕ ಸೀಸನ್ ಗಳಲ್ಲಿ ವಾಹಿನಿಯು ಸಿಲೆಬ್ರಿಟಿಗಳಿಗೇ ಆದ್ಯತೆ ನೀಡಿದ್ದರೆ, ಕೆಲವು ಸೀಸನ್ ಗಳಲ್ಲಿ ಸಾಮಾನ್ಯರಿಗೂ ಅವಕಾಶ ಕೊಟ್ಟಿದೆ. ಈ ಸಾಮಾನ್ಯರು ಆಯ್ಕೆಯಾಗಿದ್ದು ಮಾತ್ರ ರೋಚಕ. ತಮ್ಮ ತಮ್ಮ ಕ್ಷೇತ್ರಗಳ ಸಾಧನೆಯನ್ನು ವಾಹಿನಿಗೆ ತಿಳಿಸಿ ಎಂದು ಕೇಳಲಾಗಿತ್ತು. ಬಂದ ಅರ್ಜಿಗಳಲ್ಲಿ ವಿಶೇಷ ಅನಿಸಿದವರನ್ನು ವಾಹಿನಿಯೇ ಕಾಂಟ್ಯಾಕ್ಟ್ ಮಾಡಿ, ಅವರನ್ನು ಆಯ್ಕೆ ಮಾಡಲಾಯಿತು.
ಸಾಧನೆಯಷ್ಟೇ ಆಯ್ಕೆಯ ಮಾನದಂಡವಾ? ಕಂಡಿತಾ ಇಲ್ಲ. ನೀವು ಎಷ್ಟೇ ಸಾಧನೆ ಮಾಡಿದರೂ, ಬಿಗ್ ಬಾಸ್ ತಂಡ ನಡೆಸುವ ಕೆಲ ಪರೀಕ್ಷೆಗಳನ್ನು ಎದುರಿಸಲೇಬೇಕು. ದೊಡ್ಮನೆಯಲ್ಲಿ ನೂರು ದಿನ ಉಳಿಯುವಂತಹ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಇದೆಯಾ ಅಂತ ಪರೀಕ್ಷೆ ಮಾಡಲಾಗತ್ತೆ. ದೊಡ್ಮನೆ ಒಳಗೆ ಹೋಗುವ ಮುನ್ನ ಸೈಕಿಯಾಟಿಸ್ಟ್ ಕೌನ್ಸಲಿಂಗ್ ಮಾಡ್ತಾರೆ. ಜೊತೆಗೆ ನಿಮಗೆ ಕ್ರಿಮಿನಲ್ ಹಿನ್ನೆಲೆ ಏನಾದರೂ ಇದೆಯಾ ಅಂತ ತಿಳಿದುಕೊಳ್ಳಲಾಗುತ್ತೆ. ವೈದ್ಯಕೀಯ ಪರೀಕ್ಷೆ ಮಾಡಲಾಗತ್ತೆ… ಬಿಗ್ ಬಾಸ್ ಶೋ ನಿಯಮಗಳನ್ನು ತಿಳಿಸಲಾಗತ್ತೆ. ಈ ಎಲ್ಲದರಲ್ಲೂ ಪಾಸಾದರೆ ಮಾತ್ರ ಬಿಗ್ ಬಾಸ್ ಮನೆ ಪ್ರವೇಶ ದೊರೆಯುತ್ತದೆ. ನಿಮ್ಮಲ್ಲೂ ಈ ಎಲ್ಲ ಅರ್ಹತೆಗಳು ಇದ್ದರೆ ಟ್ರೈ ಮಾಡಬಹುದು.
ಒಂದು ವಿಷಯ ನೆನಪಿಡಿ, ಬಿಗ್ ಬಾಸ್ ಹೆಸರಿನಲ್ಲಿ ಹಲವಾರು ಮೋಸಗಳು ನಡೆದಿವೆ. ಮಧ್ಯವರ್ತಿಗಳು ಹಣ ದೋಚಿದ್ದಾರೆ. ಕೆಲವರು ಹಣ ಕೊಟ್ಟು ಮೋಸ ಹೋಗಿದ್ದಾರೆ. ವಾಹಿನಿಯು ಈ ವಿಷಯದಲ್ಲಿ ಯಾವುದೇ ಮಧ್ಯವರ್ತಿಗಳನ್ನು ಇಟ್ಟುಕೊಂಡಿರುವುದಿಲ್ಲ. ಆಯ್ಕೆ ಏನೇ ಇದ್ದರೂ ಅದು ಬಿಗ್ ಬಾಸ್ ತಂಡದಲ್ಲೇ ನಡೆಯುತ್ತೆ.
Web Stories