ಬಿಗ್ ಬಾಸ್ (Bigg Boss) ಮನೆಯ ‘ಸೂಪರ್ ಸಂಡ್ ವಿತ್ ಸುದೀಪ್’ (Sudeep) ಎಂದಿನಂತೆ ಇರಲಿಲ್ಲ. ಬಿಗ್ ಬಾಸ್ ಶುರುವಾಗಿ 50 ದಿನಗಳು ಕಳೆದ ಸಂರ್ಭದಲ್ಲಿ ಹಲವು ವಿಶೇಷತೆಗಳು ಮತ್ತು ಹಲವರಿಗೆ ಶಾಕ್ ಕಾದಿತ್ತು. ಲವಲವಿಕೆಯಿಂದಲೇ ತಮ್ಮ ಕಾರ್ಯಕ್ರಮವನ್ನು ನಡೆಸಿ ಕೊಡುವ ಸುದೀಪ್, ಎಲ್ಲ ಸ್ಪರ್ಧಿಗಳನ್ನು ಅಷ್ಟೇ ಪ್ರೀತಿಯಿಂದ ಮಾತನಾಡಿಸಿದರು. ಶನಿವಾರದ ಎಪಿಸೋಡ್ ಅಂದರೆ, ಅಲ್ಲೊಂದು ಎಲಿಮಿನೇಷನ್ ಇರತ್ತೆ. ಕಣ್ಣೀರು, ಕಲರವ ಎಲ್ಲವೂ ಬೆರೆತಿರುತ್ತದೆ. ಈ ವಾರವೂ ಅದೆಲ್ಲವೂ ಇತ್ತು. ಆದರೆ, ಕೊನೆಯ ಕ್ಷಣ ಮಾತ್ರ ಬೇರೆಯಾಗಿತ್ತು.
ಶನಿವಾರ ಎಪಿಸೋಡ್ ಮುಗಿಯುತ್ತಿದ್ದಂತೆಯೇ ಆ ವಾರ ಬಿಗ್ ಬಾಸ್ (Kannada Bigg Boss)ಮನೆಯಿಂದ ಒಬ್ಬರನ್ನು ಹೊರಹಾಕಲಾಗುತ್ತದೆ. ಈ ವಾರ ಅಂಥದ್ದೊಂದು ಗಳಿಗೆ ಬಂದಿದ್ದು ಆರ್ಯವರ್ಧನ್ ಗುರೂಜಿಗೆ. ಈ ವಾರ ನೀವು ಮನೆಯಿಂದ ಹೊರ ಬರುತ್ತಿದ್ದೀರಿ ಎಂದು ಗುರೂಜಿಗೆ ಸುದೀಪ್ ಅವರು ಹೇಳಿ ಆಗಿತ್ತು. ‘ನನಗೆ 13 ನಂಬರ್ ಆಗಿ ಬರಲ್ಲ, ನಾಮಿನೇಟ್ ಮಾಡಬೇಡಿ ಅಂದರೂ ಕೇಳಲಿಲ್ಲ’ ಎಂದು ಗುರೂಜಿ ಕಣ್ಣೀರು ಕೂಡ ಇಟ್ಟರು. ಮನೆಯಲ್ಲಿದ್ದವರ ಹೃದಯ ಭಾರ ಭಾರ. ರೂಪೇಶ್ ಶೆಟ್ಟಿ (Rupesh Shetty) ಅತ್ತೇ ಬಿಟ್ಟರು. ಎಲ್ಲರೊಂದಿಗೆ ಖುಷಿಯಲ್ಲಿದ್ದ ಗುರೂಜಿ, ಎಲಿಮಿನೇಷನ್ ಸುದ್ದಿ ಸ್ಫೋಟವಾಗುತ್ತಿದ್ದಂತೆಯೇ ಕಣ್ಣೀರಿನೊಂದಿಗೆ ತಮ್ಮ ರೂಮ್‍ಗೆ ಹೊರಟರು.
ಗುರೂಜಿ (Aryavardhan Guruji) ಮನೆಯಿಂದ ಆಚೆ ಬರಲು ಕೆಲವೇ ನಿಮಿಷಗಳ ವೇಳೆ ಕೊಟ್ಟಿದ್ದ ಕಾರಣಕ್ಕಾಗಿ ಸೂಟ್ ಕೇಸ್ ರೆಡಿ ಮಾಡಿಕೊಂಡು ಎಲ್ಲರಿಗೂ ಧನ್ಯವಾದ ಕೂಡ ಹೇಳಿದರು. ಕೆಲವರು ಅತ್ತರು, ಇನ್ನೂ ಕೆಲವರು ಕ್ಷಮೆ ಕೇಳಿದರು. ನಿತ್ಯ ಮನೆಯಲ್ಲಿ ಏನಾಗಬೇಕಿತ್ತೋ ಎಲ್ಲವೋ ಆಯಿತು. ಆ ನಂತರ ನೇರವಾಗಿ ನಾಮಿನೇಟ್ ಮಾಡುವಂತಹ ವಿಶೇಷ ಅಧಿಕಾರ ಕೂಡ ಗುರೂಜಿಗೆ ನೀಡಲಾಯಿತು. ಇನ್ನೇನು ಗುರೂಜಿ ನೇರ ನಾಮಿನೇಟ್ ಮಾಡಲು ಜನರನ್ನು ಹುಡುಕುವಾಗಲೇ ಮತ್ತೇ ಬಿಗ್ ಬಾಸ್ ಧ್ವನಿ ಬಂತು.
ಅಲ್ಲಿವರೆಗೂ ಬಿಗ್ ಬಾಸ್ ಸಣ್ಣದೊಂದು ಗೇಮ್ ಆಡಿದ್ದರು. ಈ ವಾರ ಯಾವುದೇ ವೋಟಿಂಗ್ ಮತ್ತು ನಾಮಿನೇಷನ್ ಪ್ರಕ್ರಿಯೆ ಇರದೇ ಇರುವ ಕಾರಣಕ್ಕಾಗಿ ಈ ವಾರ ಯಾರೂ ಮನೆಯಿಂದ ಆಚೆ ಹೋಗುತ್ತಿಲ್ಲವೆಂದು ಘೋಷಣೆ ಮಾಡಿದರು. ಗುರೂಜಿ ನೀವು ಮನೆ ಒಳಗೆ ಹೋಗಬಹುದು ಎಂದು ಸರ್ ಪ್ರೈಸ್ ನೀಡಿದರು. ಗುರೂಜಿ ಮತ್ತೆ ಕಣ್ಣೀರು ಹಾಕುತ್ತಲೇ ವಿಶೇಷ ಧನ್ಯವಾದಗಳನ್ನು ತಿಳಿಸಿ ಬಿಗ್ ಬಾಸ್ ಮನೆ ಒಳಗೆ ಹೋದರು. ತಮಗೆ 13 ನಂಬರ್ ಆಗಿ ಬರುವುದಿಲ್ಲ ಎನ್ನುವುದನ್ನು ಬಿಗ್ ಬಾಸ್ ಸುಳ್ಳಾಗಿಸುವ ಮೂಲಕ ಬಿಗ್ ಶಾಕ್ ನೀಡಿದ್ದರು.