– ಲಾಸ್ಟ್ ಕಾಲ್ ರೆಕಾರ್ಡಿಂಗ್‍ನಲ್ಲಿತ್ತು ಸಾವಿನ ಸೀಕ್ರೆಟ್!
ಶಿವಮೊಗ್ಗ: ಜಿಲ್ಲೆಯ ಉಪವಿಭಾಗಾಧಿಕಾರಿ ಪತ್ನಿ, ಶಾಲಾ ಶಿಕ್ಷಕಿ ಸುಮಾ ಅವರ ಸಾವಿನ ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ದೊರೆತಿದೆ. ಸಾವಿಗೂ ಮುನ್ನ ಅವರು ಕರೆ ಮಾಡಿದ್ದ ಆಡಿಯೋ ಕಾಲ್ ರೆಕಾರ್ಡಿಂಗ್ ನಿಂದ ಅವರ ಆತ್ಮಹತ್ಯೆ ಹಿಂದಿನ ಕಾರಣ ಬೆಳಕಿಗೆ ಬಂದಿದೆ.
ಶಿಕ್ಷಕಿ ಸುಮಾ (40) ಆತ್ಮಹತ್ಯೆಗೆ ಅವರು ಕಾರ್ಯನಿರ್ವಹಿಸುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕಿಯ ಕಿರುಕುಳವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಉಪವಿಭಾಗಾಧಿಕಾರಿ ಪ್ರಕಾಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ಪತ್ನಿಗೆ ಇಲ್ಲ ಸಲ್ಲದ ಕೆಲಸ ಹೇಳಿ ಶಾಲೆಯ ಮುಖ್ಯ ಶಿಕ್ಷಕಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Advertisement
Advertisement
ಡಿ.24 ರಂದು ಶಿವಮೊಗ್ಗ ನಗರ ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿತ್ತು. ಶಾಲೆಗೆ ರಜೆ ಇದೆ ಎಂದು ಮಕ್ಕಳು ಕೂಡ ರಜೆಯ ಮಜಾದಲ್ಲಿದ್ದರು. ಆದರೆ ಶಾಲೆಯ ಶಿಕ್ಷಕಿ ಮಾತ್ರ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದು ಎಲ್ಲರಿಗೂ ಶಾಕ್ ನೀಡಿತ್ತು.
Advertisement
ಶಿವಮೊಗ್ಗ ಉಪವಿಭಾಗಾಧಿಕಾರಿ ಪ್ರಕಾಶ್ ಅವರ ಪತ್ನಿ ಸುಮಾ ಅವರು ನೇಣಿಗೆ ಶರಣಾಗಿದ್ದಾರೆ ಎಂದ ಕೂಡಲೇ ಇಡೀ ನಗರದ ಸರ್ಕಾರಿ ಅಧಿಕಾರಿಗಳಲ್ಲಿ, ಸರ್ಕಾರಿ ನೌಕರರಲ್ಲಿ ತಲ್ಲಣ ಉಂಟಾಗಿತ್ತು. ಅಷ್ಟೇ ಅಲ್ಲದೇ ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಕೂಡ ಆತಂಕ ಉಂಟಾಗಿತ್ತು.
Advertisement
ಅಂದು ಸುಮಾ ಅವರ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ದಂಪತಿಗೆ ವಿವಾಹವಾಗಿ 12 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ ಎಂಬುದೇ ಕಾರಣ ಎನ್ನಲಾಗಿತ್ತು. ಈ ಕಾರಣಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಮೃತ ಸುಮಾ ಅವರ ತಾಯಿ ಅವರು ಕೂಡ, ನನ್ನ ಮಗಳ ಸಾವಿಗೆ ದಂಪತಿಗೆ ಮಕ್ಕಳಾಗದಿರುವುದು ಕಾರಣ ಎಂದು ಪೊಲೀಸರಿಗೆ ತಿಳಿಸಿದ್ದರು.
ಘಟನೆ ನಡೆದು ಸುಮಾರು 10 ದಿನಗಳಾದ ಬಳಿಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾ ಅವರಿಗೆ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ಅವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಆಡಿಯೋವೊಂದು ಬೆಳಕಿಗೆ ಬಂದಿದೆ. ಸುಮಾ ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಸಹೋದ್ಯೋಗಿ ಕೆ.ಜಿ.ಎಸ್ ಎಂಬುವವರಿಗೆ ಕರೆ ಮಾಡಿ, ಮುಖ್ಯ ಶಿಕ್ಷಕಿ ಸರಸ್ವತಿ ಅವರು ನನಗೆ ಇಲ್ಲ ಸಲ್ಲದ ಕೆಲಸ ಹೇಳಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ ಎನ್ನಲಾಗಿದೆ.
ಸುಮಾ ಅವರ ದೂರವಾಣಿ ಕರೆಯನ್ನು ಶಿಕ್ಷಕಿಯಾಗಿರುವ ಕೆ.ಜಿ.ಎಸ್. ಅವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡಿಕೊಂಡಿದ್ದು, ಈ ಆಡಿಯೋ ಪ್ರಕರಣಕ್ಕೆ ತಿರುವು ನೀಡಿದೆ. ಶಾಲಾ ಮುಖ್ಯಶಿಕ್ಷಕಿ ಸರಸ್ವತಿಯ ಕಿರುಕುಳವೇ ಎಸಿ ಪತ್ನಿ ನೇಣಿಗೆ ಶರಣಾಗಲೂ ಕಾರಣ ಎಂಬ ಆರೋಪಕ್ಕೆ ಆಡಿಯೋ ರೆಕಾರ್ಡ್ ಪ್ರಮುಖ ಆಧಾರವಾಗಿದೆ. ಈ ಆಧಾರವನ್ನಿಟ್ಟುಕೊಂಡು ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ ವಿರುದ್ಧ ಇದೀಗ ಉಪವಿಭಾಗಾಧಿಕಾರಿ ಪ್ರಕಾಶ್ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭದ್ರಾವತಿಯ ಸಂಚಿ ಹೊನ್ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸುಮಾ ಅವರು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು. ಈ ಶಾಲೆಗೆ ಬಂದಾಗಿನಿಂದಲೂ ಇಲ್ಲಿನ ಮುಖ್ಯ ಶಿಕ್ಷಕಿ ಸರಸ್ವತಿ ಇವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿದೆ. ಈ ಬಗ್ಗೆ ಸುಮಾ ಅವರು ತಮ್ಮ ಸಹೋದ್ಯೋಗಿ ಬಳಿ ಬೇಸರ ಹೇಳಿಕೊಂಡಿದ್ದು ಶಾಲೆಯಲ್ಲಿ ಇನ್ನಿತರರಿಗೂ ಈ ರೀತಿ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.
ಜಿಲ್ಲೆಯ ಪ್ರಮುಖ ಹುದ್ದೆಯಾಗಿರುವ ಉಪವಿಭಾಗಾಧಿಕಾರಿಯೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಸಂಶಯಗಳನ್ನು ಮೂಡಿಸಿತ್ತು. ಆದರೆ ಅವರ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುವುದು ತಿಳಿದು ಬಂದಿರಲಿಲ್ಲ. ಸದ್ಯ ಸೋಮವಾರ ಸಂಜೆ ಪ್ರಕರಣದ ಆಡಿಯೋ ದೊರೆತಿರುವುದರಿಂದ ದೂರು ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.