ಕೋಲಾರ: ಭಾನುವಾರ ರಾತ್ರಿ ವೇಳೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿಯ ಕೂಗಿಟಿಗಾನಹಳ್ಳಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆ ಸಂಪೂರ್ಣ ಕುಸಿದು ಬಿದ್ದಿದೆ.
ಕೂಗಿಟಿಗಾನಹಳ್ಳಿ ಗ್ರಾಮದ ನಿವಾಸಿ ವೆಂಕಟೇಶಪ್ಪ ಅವರ ಮನೆ ಹಾಗೂ ಅದರ ಪಕ್ಕವಿದ್ದ ಅಂಗಡಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಭಾನುವಾರ ರಾತ್ರಿ ಮಳೆರಾಯನ ಆರ್ಭಟಕ್ಕೆ ಮನೆ ಹಾಗೂ ಅಂಗಡಿ ಕಳೆದುಕೊಂಡು ವೆಂಕಟೇಶಪ್ಪ ಅವರ ಕುಟುಂಬ ಬೀದಿಯಲ್ಲಿ ನಿಲ್ಲುವಂತಾಗಿದೆ. ದುಡಿಮೆಗೆ ಆಧಾರವಾಗಿದ್ದ ಅಂಗಡಿ ಹಾಗೂ ತಲೆ ಮೇಲೆ ಸೂರಿಲ್ಲದೆ ಕುಟುಂಬ ಕಂಗಾಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ ಕೂಡ ಸ್ಥಳಕ್ಕೆ ಇನ್ನೂ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.