ನವದೆಹಲಿ: ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಸಂಬಂಧ ತನಿಖೆಗೆ ಆದೇಶ ನೀಡಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪ್ರಧಾನಿ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕಾಂಗ್ರೆಸ್ಸಿಗೆ ಭಾರೀ ಮುಖಭಂಗವಾಗಿದೆ.
ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ತ್ರಿ ಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ.
ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ವಾದ ಮಂಡಿಸಿದಾಗ ಇದೊಂದು ರಾಷ್ಟ್ರೀಯ ಭದ್ರತಾ ವಿಚಾರ ಆಗಿರೋದ್ರಿಂದ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಹೇಳಲು ಸಾಧ್ಯವಿಲ್ಲ. ಜೊತೆಗೆ ಇದು ಯಾವ ರೀತಿಯಲ್ಲಿ ಒಪ್ಪಂದ ಆಗಿದೆ ಅನ್ನೋದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಹೀಗಾಗಿ ಖುದ್ದು ಲೋಕಸಭೆಯಲ್ಲೇ ಈ ಅಂಶವನ್ನು ಬಹಿರಂಗಪಡಿಸಲು ಸಾಧ್ಯ. ಆದುದರಿಂದ ಸುಪ್ರೀಂ ಮಧ್ಯಸ್ಥಿಕೆ ವಹಿಸಬಾರದು ಅಂತ ಹೇಳಿದ್ದರು. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ
ಇದು ಶಾಸಕಾಂಗದ ವ್ಯಾಪ್ತಿಗೆ ಬರೋದ್ರಿಂದ ಇದು ದೇಶದ ಹಿತಾಶಕ್ತಿ ಹಾಗೂ ಭದ್ರತೆಗಾಗಿ ನಡೆದ ಒಪ್ಪಂದವಾಗಿದೆ. ಈ ಅಂಶಗಳು ಬಹಿರಂಗವಾದ್ರೆ ವಿರೋಧಿ ರಾಷ್ಟ್ರಗಳಿಗೆ ಜೆಟ್ ವಿಮಾನದಲ್ಲಿ ಬಳಸಿರುವ ತಂತ್ರಜ್ಞಾನಗಳ ಮಾಹಿತಿ ಸೋರಿಕೆಯಾಗುತ್ತದೆ ಅನ್ನೋ ಆತಂಕವನ್ನು ಸುಪ್ರೀಂನಲ್ಲಿ ಕೆಕೆ ವೇಣುಗೋಪಾಲ್ ಅವರು ವ್ಯಕ್ತಪಡಿಸಿದ್ದರು. ಈ ಅಂಶವನ್ನು ಇದೀಗ ಪರಿಗಣಿಸಿ ಮಾಹಿತಿ ಬಹಿರಂಗ ಮಾಡುವುದು ಬೇಡ ಜೊತೆಗೆ ತನಿಖೆಯೂ ಬೇಡ ಅನ್ನೋ ಅಭಿಪ್ರಾಯವನ್ನು ಸುಪ್ರೀಂ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಇದೊಂದು ದೊಡ್ಡ ಮಟ್ಟದ ಗೆಲುವಾಗಿದೆ. ಈ ಮೂಲಕ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ
ಏನಿದು ರಫೇಲ್ ಒಪ್ಪಂದ?
ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.
ಮೋದಿ ವಿರುದ್ಧ ರಫೆಲ್ ಆರೋಪಗಳೇನು..?
ಏಪ್ರಿಲ್ 10, 2015ರಲ್ಲಿ ಪ್ರಧಾನಿ ಮೋದಿ ರಫೆಲ್ ಒಪ್ಪಂದವನ್ನ ಘೋಷಿಸಿದ್ದರು. ಬಳಿಕ ಹೆಚ್‍ಎಎಲ್ ಪಾಲಾಗಬೇಕಿದ್ದ ರಫೇಲ್ ಯುದ್ಧ ವಿಮಾನ ಉತ್ಪಾದನೆ ವ್ಯವಹಾರ ಅನಿಲ್ ಅಂಬಾನಿಗೆ ವಹಿಸಿದ್ದರು. ಇದು ಸಾಕಷ್ಟು ವ್ಯವಹಾರಗಳಲ್ಲಿ ಕೈ ಸುಟ್ಟುಕೊಂಡು ಸಾಲದ ಹೊರೆಯಲ್ಲಿರುವ ಅಂಬಾನಿಗೆ ಮೋದಿಗೆ ವರದಾನ ನೀಡಿದೆ. ರಫೇಲ್ ವ್ಯವಹಾರ ಘೋಷಿಸುವ ವೇಳೆ ಯಾವುದೇ ರಕ್ಷಣಾ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು.
ಅಲ್ಲದೇ ಪ್ರಧಾನಿ ಏಕಪಕ್ಷೀಯವಾಗಿಯೇ ವ್ಯವಹಾರ ಘೋಷಿಸಿದ್ದಾರೆ. ರಕ್ಷಣಾ ಸಚಿವರೂ, ಸಮಿತಿಗೂ ಮಾಹಿತಿ ಇಲ್ಲ. 36 ವಿಮಾನಗಳ ಖರೀದಿಗೆ ಈ ಹಿಂದೆ ಯುಪಿಎ ಒಪ್ಪಿಕೊಂಡಿದ್ದ ಬೆಲೆಗಿಂತಲೂ ಹೆಚ್ಚು ಹಣ ಸಂದಾಯ ಮಾಡಲಾಗಿದೆ. ರಫೇಲ್ ವ್ಯವಹಾರ ಘೋಷಣೆಯಾದ ಸಂದರ್ಭದಲ್ಲಿ ಅನಿಲ್ ಅಂಬಾನಿ ಕಂಪನಿಯೇ ಅಸ್ತಿತ್ವದಲ್ಲಿ ಇರಲಿಲ್ಲ. ರಫೇಲ್ ಡೀಲ್ ಸಿಕ್ಕ ಕೆಲ ದಿನಗಳ ಬಳಿಕವಷ್ಟೇ ಅನಿಲ್ ಅಂಬಾನಿ ವಿಮಾನ ಉತ್ಪಾದನೆಗಾಗಿ ಪ್ರತ್ಯೇಕ ಕಂಪನಿ ಸ್ಥಾಪಿಸಿದ್ದರು. 126 ವಿಮಾನಗಳಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳ ಖರೀದಿ ಮಾಡಲಾಗಿದೆ. 108 ವಿಮಾನಗಳನ್ನು `ಭಾರತದಲ್ಲೇ ಉತ್ಪಾದಿಸಿ’ ಸಹಭಾಗಿತ್ವದಲ್ಲಿ ಭಾರತದಲ್ಲೇ ಉತ್ಪಾದನೆಗೆ ಒಪ್ಪಿಗೆ ನೀಡಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿತ್ತು.
ಕೇಂದ್ರಕ್ಕೆ ಸುಪ್ರೀಂ ನೀಡಿದ್ದ ಸೂಚನೆಯೇನು?
ಕಳೆದ ಅಕ್ಟೋಬರ್ ತಿಂಗಳಲ್ಲಿ 10 ದಿನದ ಒಳಗಡೆ ಮುಚ್ಚಿದ ಲಕೋಟೆಯಲ್ಲಿ ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಪಿಐಎಲ್‍ನಲ್ಲಿ ಏನಿತ್ತು?
59 ಸಾವಿರ ಕೋಟಿ ರೂ. ನೀಡಿ ಫ್ರಾನ್ಸ್ ನಿಂದ 36 ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ವಕೀಲರಾದ ಮನೋಹರ್ ಲಾಲ್ ಶರ್ಮಾ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಪಿಐಎಲ್ ಜೊತೆಗೆ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಪಿಐಎಲ್ ಸಲ್ಲಿಸಿದ್ದರು.
ಎಚ್‍ಎಎಲ್ ಕೈ ಬಿಡಲು ಕಾರಣಗಳೇನು?
ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮಥ್ರ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್’ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv