ವಾಷಿಂಗ್ಟನ್: ಜೋ ಬೈಡೆನ್ (Joe Biden) ಯುಎಸ್ ಅಧ್ಯಕ್ಷೀಯ ಚುನಾವಣೆಯಿಂದ ಹೊರಗುಳಿದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಹೊಸ ಅಭ್ಯರ್ಥಿಯಾಗಿ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ (Kamala Harris) ಅವರನ್ನು ಅನುಮೋದಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಬೈಡೆನ್ ಮತ್ತೆ ಸ್ಪರ್ಧಿಸುವ ವಿಚಾರವಾಗಿ ಅನೇಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಸ್ವತಃ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೇ, ಬೈಡೆನ್ ಸ್ಪರ್ಧೆ ಮಾಡುವುದು ಬೇಡ ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಚರ್ಚೆಗಳ ಮಧ್ಯೆ ವಯಸ್ಸು ಹಾಗೂ ಮಾನಸಿಕ ಸಾಮರ್ಥ್ಯದ ದೃಷ್ಟಿಯಿಂದ ಬೈಡೆನ್ ಚುನಾವಣಾ ಕಣದಿಂದ ಹಿಂದೆ ಸರಿದಂತೆ ಕಾಣುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಓರ್ವ ಯೋಧನಿಗೆ ಗಾಯ
ಚುನಾವಣೆ ಹೊತ್ತಲ್ಲಿ ಈ ಅಚ್ಚರಿದಾಯಕ ಬೆಳವಣಿಗೆ ಡೆಮಾಕ್ರಟಿಕ್ ಪಕ್ಷದಲ್ಲಿ ಪ್ರಕ್ಷಬ್ದತೆಗೆ ಕಾರಣವಾಗಬಹುದು. ಆದರೆ ಪಕ್ಷವನ್ನು ಪುನಶ್ಚೇತನಗೊಳಿಸಲು ಇದು ಸಹಕಾರಿಯಾಗಬಹುದು. ಪ್ರಬಲ ಪೈಪೋಟಿ ನೀಡುತ್ತಿರುವ ಡೊನಾಲ್ಡ್ ಟ್ರಂಪ್ ಸೋಲಿಸಿ, ಕಮಲಾ ಹ್ಯಾರಿಸ್ ಅವರನ್ನು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರನ್ನಾಗಿ ಮಾಡುವ ಗುರಿಯೊಂದಿಗೆ ಪಕ್ಷ ಮುನ್ನಡೆಯಲು ಬೂಸ್ಟ್ ಕೊಡಬಹುದು ಎನ್ನಲಾಗಿದೆ.
ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಬೈಡೆನ್ ಅವರನ್ನೇ ಗುರಿಯಾಗಿಸಿ ಟ್ರಂಪ್ ಮಾತನಾಡುತ್ತಿದ್ದರು. ಬೈಡೆನ್ ಮತ್ತೆ ಅಧ್ಯಕ್ಷರಾಗಲು ಯೋಗ್ಯರಲ್ಲ. ಅವರು ಸೇವೆ ಮಾಡಲು ಯೋಗ್ಯರಲ್ಲ ಎಂಬ ಮಾತುಗಳನ್ನಾಡಿದ್ದರು. ಇದನ್ನೂ ಓದಿ: ಅಗ್ನಿವೀರರಿಗೆ ಪೊಲೀಸ್, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲು ಉತ್ತರಾಖಂಡ ಸರ್ಕಾರ ನಿರ್ಧಾರ: ಸಿಎಂ ಧಾಮಿ