ಮೈಸೂರು: ಎರಡು ತಿಂಗಳ ಒಡನಾಟ.. ನಾಡಿನ ಜನರ ಪ್ರೀತಿ… ದಸರೆಯ ಸಂಭ್ರಮ… ಈಗ ಎಲ್ಲವೂ ನೆನಪುಗಳಷ್ಟೇ. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಯಶಸ್ವಿಯಾಗಿ ಪೂರೈಸಿದ ಗಜಪಡೆ, ಮತ್ತೆ ಕಾಡಿನತ್ತ ಮುಖ ಮಾಡಿದೆ.
ನಾಡಿನ ಹೆಮ್ಮೆಯ ವಿಜಯದಶಮಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದ ಕ್ಯಾಪ್ಟನ್ ಪ್ರಶಾಂತನ ನೇತೃತ್ವದ ಗಜಪಡೆ, ಇಂದು ಲಾರಿಗಳನ್ನೇರಿ ತಮ್ಮ ತಮ್ಮ ಶಿಬಿರಗಳತ್ತ ಪ್ರಯಾಣ ಬೆಳೆಸಿದೆ. ಕಳೆದ ಎರಡು ತಿಂಗಳಿದ ಮೈಸೂರಿನ ಅರಮನೆ ಆವರಣದಲ್ಲಿದ್ದ ಆನೆಗಳಿಗೆ ನಾಡಿನ ಜನರ ಪ್ರೀತಿ ಹೊಸದಲ್ಲ. ಆದರೂ ಪ್ರತಿ ದಸರಾ ಅವುಗಳ ಬದುಕಿನಲ್ಲೊಂದು ವಿಶೇಷ ಅಧ್ಯಾಯ. ಇದನ್ನೂ ಓದಿ: ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ʻಕೈʼ ಅಭ್ಯರ್ಥಿಯಿಂದ ಗಿಫ್ಟ್ ಕೂಪನ್ ಹಂಚಿಕೆ ಆರೋಪ – ಬಿಜೆಪಿ-ಜೆಡಿಎಸ್ ನಿಯೋಗದಿಂದ ದೂರು
ಕಾಡಿನಿಂದ ನಾಡಿಗೆ ಬಂದು, ಅರಮನೆಯ ಅಂಗಳದಲ್ಲಿ ತಾಲೀಮು ನಡೆಸಿ, ಲಕ್ಷಾಂತರ ಜನರ ಕಣ್ಮನ ಸೆಳೆದು, ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿಯ ಭಾರ ಹೊತ್ತು ಸಾಗಿದ ಆನೆಗಳು ಈಗ ತಮ್ಮ ಮೂಲ ನೆಲೆಯತ್ತ ಹೊರಟವು. ಅರಮನೆಯ ಅಂಗಳದಲ್ಲಿ ಕೇಳಿಬರುತ್ತಿದ್ದ ಗಜಪಡೆಯ ಗಾಂಭೀರ್ಯದ ಹೆಜ್ಜೆಗಳು ಇನ್ನು ಕೆಲಕಾಲ ಕೇಳಿಸುವುದಿಲ್ಲ. ಜನರ ಚಪ್ಪಾಳೆ, ಕ್ಯಾಮೆರಾಗಳ ಮಿಂಚು, ಮಕ್ಕಳ ಸಂಭ್ರಮ, ಮಾವುತರ ಪ್ರೀತಿ… ಇವೆಲ್ಲವನ್ನೂ ಹಿಂದೆ ಬಿಟ್ಟು ಗಜಪಡೆ ಕಾಡಿನ ಹಾದಿ ಹಿಡಿದಿವೆ
ಲಾರಿಗಳ ಮೇಲೆ ನಿಂತ ಆನೆಗಳು ತಮ್ಮ ತಮ್ಮ ಶಿಬಿರಗಳತ್ತ ಸಾಗುತ್ತಿದ್ದರೆ, ಅವುಗಳನ್ನು ನೋಡಲು ಬಂದ ಜನರ ಮನಸ್ಸಿನಲ್ಲಿ ಮಾತ್ರ ವಿದಾಯದ ಭಾವ. ದಸರಾ ಮುಗಿದಿದೆ. ಸಂಭ್ರಮಕ್ಕೆ ತೆರೆ ಬಿದ್ದಿದೆ. ಅರಮನೆಯ ಅಂಗಳ ಮತ್ತೆ ತನ್ನ ಸಹಜ ಮೌನಕ್ಕೆ ಮರಳಲಿದೆ. ಆದರೆ ಅಂಬಾರಿ ಹೊತ್ತ ಪ್ರಶಾಂತ ಸೇರಿದಂತೆ ಗಜಪಡೆಯ ಸಾಹಸ, ಶಿಸ್ತು, ಗಾಂಭೀರ್ಯ ಜನರ ನೆನಪಿನಲ್ಲಿ ಸದಾ ಹಸಿರಾಗಿರಲಿದೆ.
ಇನ್ನು ಈ ಗಜಪಡೆಯ ದರ್ಶನಕ್ಕೆ ಮುಂದಿನ ವರ್ಷದ ದಸರಾವರೆಗೆ ಕಾಯಬೇಕು. ದಸರಾ ಮುಗಿದಿರಬಹುದು.. ಆದರೆ ಗಜಪಡೆಯ ಮೇಲಿನ ಪ್ರೀತಿ ಮುಗಿಯುವುದಿಲ್ಲ. ಮುಂದಿನ ದಸರೆಯ ನಿರೀಕ್ಷೆ ಈಗಿನಿಂದಲೇ ಶುರು.ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ – ಚಿಕಿತ್ಸಾ ದರ ಪಟ್ಟಿ ಪ್ರದರ್ಶನ ಕಡ್ಡಾಯಕ್ಕೆ ಸರ್ಕಾರ ಕ್ರಮ


