ಬೀದರ್: ತಾಲೂಕಿನ ಕೋಳ್ಳಾರ್ ಗ್ರಾಮದ ಬಳಿ ಇರುವ ಶ್ರಮಜೀವಿ ವಸತಿ ಪ್ರೌಢ ಶಾಲೆಯ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಷಕರು ಕೊಲೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯನ್ನು ಸುಪ್ರಿಯಾ ಎಂದು ಗುರುತಿಸಲಾಗಿದೆ. ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನರಸಿಂಗ್ ತಾಂಡ ನಿವಾಸಿಯಾಗಿದ್ದ ಸುಪ್ರಿಯಾ ಕಳೆದ ಜೂನ್ ತಿಂಗಳಿಂದ ಈ ವಸತಿ ಶಾಲೆಯಲ್ಲಿ ಓದುತ್ತಿದ್ದಳು.
ವಸತಿ ಶಾಲೆಯ ಆಡಳಿತ ಮಂಡಳಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಪೋಷಕರು ಮಾತ್ರ ಇದು ಆತ್ಮಹತ್ಯೆ ಅಲ್ಲಾ ಕೊಲೆ ಎಂದು ಆರೋಪಿಸುತ್ತಿದ್ದಾರೆ.
ವಿದ್ಯಾರ್ಥಿನಿಯ ಮೃತದೇಹವನ್ನು ಪೋಷಕರಿಗೆ ಮಾಹಿತಿ ನೀಡದೆ ಆಡಳಿತ ಮಂಡಳಿ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದೆ. ಏಕಾಏಕಿ ಯಾರಿಗೂ ಮಾಹಿತಿ ನೀಡದೆ ಆಡಳಿತ ಮಂಡಳಿಯವರು ಆಸ್ಪತ್ರೆಗೆ ಯಾಕೆ ತೆಗೆದುಕೊಂಡು ಬಂದ್ರು ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ ನ್ಯೂಟೌನ್ ಪಿಎಸ್‍ಐ ಗುರು ಪಾಟೀಲ್ ಪರಿಶೀಲನೆ ಮಾಡಿದ್ದಾರೆ.