ಬೀದರ್: ಜಿಲ್ಲೆಯಲ್ಲಿ ಶಾದಿ ಮಹಲ್ (Shadi Mahal) ನಿರ್ಮಾಣ ಮಾಡುವುದಾಗಿ ತಿಳಿಸಿ, ಅಧಿಕಾರಿಗಳು ಕೋಟ್ಯಂತರ ಹಣ ನುಂಗಿದ್ರಾ ಎನ್ನುವ ಪ್ರಶ್ನೆ ಮೂಡಿದೆ.
ಹೌದು, ಜಿಲ್ಲೆಯಲ್ಲಿ ಒಟ್ಟು 26 ಶಾದಿ ಮಹಲ್‌ಗಳ ನಿರ್ಮಾಣಕ್ಕೆ ಕೋಟ್ಯಂತರ ಹಣ ನೀಡಲಾಗಿದ್ದು, ಆದರೆ ನಿಗದಿತ ಸ್ಥಳಗಳಲ್ಲಿ ಶಾದಿ ಮಹಲ್‌ಗಳೇ ಕಾಣುತ್ತಿಲ್ಲ. ಹೀಗಾಗಿ ಈ ಶಾದಿ ಮಹಲ್‌ಗಳ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಸಂಸ್ಥೆಯವರು ಕೋಟ್ಯಂತರ ಹಣ ಗೋಲ್ಮಾಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.ಇದನ್ನೂ ಓದಿ: ಡಿಗ್ರಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಇನ್ಮುಂದೆ ಸಿಸಿಟಿವಿ ಕಣ್ಗಾವಲು
ಸರ್ಕಾರ ಬಡವರಿಗಾಗಿ ಕೊಟ್ಟ ಯೋಜನೆ ಇದೀಗ ಭ್ರಷ್ಟರ ಹೊಟ್ಟೆ ತುಂಬಿಸಿದೆ. 2014ರಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಬಡ ಅಲ್ಪಸಂಖ್ಯಾತರಿಗಾಗಿ ಶಾದಿ ಮಹಲ್ ನಿರ್ಮಾಣ ಘೋಷಿಸಿತ್ತು. ಅದರಂತೆ ಜಿಲ್ಲೆಯಲ್ಲಿ 6 ಕೋಟಿ ರೂ.ಗೂ ಅಧಿಕ ಹಣದಲ್ಲಿ ಒಟ್ಟು 26 ಶಾದಿಮಹಲ್ ನಿರ್ಮಾಣಕ್ಕೆ ಸೂಚಿಸಿತ್ತು.
ಶಾದಿಮಹಲ್ ನಿರ್ಮಾಣಕ್ಕೆ ಕೋಟಿ ಕೋಟಿ ಹಣವೇನೋ ಬರುತ್ತಿದೆ. ಆದರೆ ಬಹುತೇಕ ಕಡೆಗಳಲ್ಲಿ ಶಾದಿಮಹಲ್‌ಗಳ ನಿರ್ಮಾಣ ಆಗಿಲ್ಲ. ದಾಖಲೆಗಳ ಪ್ರಕಾರ, ಬೀದರ್‌ನ ಚಿದ್ರಿಯಲ್ಲಿ ಎರಡು ಶಾದಿ ಮಹಲ್‌ಗಳು ಇವೆ ಎನ್ನಲಾಗುತ್ತಿತ್ತು. `ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ಮಾಡಿದಾಗ ಶಾದಿ ಮಹಲ್ ಇಲ್ಲದೆ ಇರೋದು ಕಂಡುಬಂದಿದೆ. ಈ ಶಾದಿ ಮಹಲ್ ಸ್ಥಳದಲ್ಲಿ ಕೆಲವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ.
ಗ್ರಾಮಗಳನ್ನೆಲ್ಲಾ ಸುತ್ತಾಡಿದ್ರು ಶಾದಿ ಮಹಲ್ ಸಿಗುವುದೇ ಇಲ್ಲ. ದಾಖಲೆಗಳ ಪ್ರಕಾರ, ಅಷ್ಟೂರಿನಲ್ಲಿ 7 ವರ್ಷದ ಹಿಂದೆ ಶಾದಿ ಮಹಲ್ ನಿರ್ಮಾಣ ಮಾಡಲಾಗಿದೆ. 50 ಲಕ್ಷ ರೂ. ಅನುದಾನದಲ್ಲಿ ಈಗಾಗಲೇ 20 ಲಕ್ಷ ರೂ. ಹಣ ಮೊದಲ ಕಂತು ನೀಡಿದ್ರೂ ನಿರ್ಮಾಣವಾಗಿಲ್ಲ. ಮೇಲಾಧಿಕಾರಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈ ಬಗ್ಗೆ ವರದಿ ಕೂಡ ನೀಡಿದ್ದಾರೆ. ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯನ್ನು ಕೇಳಿದ್ರೆ 2018ರ ಬಳಿಕ ಜಿಲ್ಲೆಯಲ್ಲಿ ಯಾವುದೇ ಹೊಸ ಶಾದಿ ಮಹಲ್ ಅನುಮೋದನೆಯಾಗಿಲ್ಲ. ಸ್ಥಳ ಬದಲಾವಣೆ ಕಾರಣ ಇದ್ದು, ನೋಟಿಸ್ ನೀಡಿದ್ದಾಗಿ ಹೇಳಿದ್ದಾರೆ.
ಬಡ ಅಲ್ಪಸಂಖ್ಯಾತರಿಗೆ ಅನುಕೂಲವಾಗಲಿ ಎಂದು ಸರ್ಕಾರ ಮಾಡಿದ್ದ ಶಾದಿ ಮಹಲ್ ಯೋಜನೆ ಹಣ ಕಂಡವರ ಪಾಲಾಗ್ತಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.ಇದನ್ನೂ ಓದಿ: Haveri | ಶಾಲಾ ಬಸ್ ಚಾಲನೆ ವೇಳೆ ಹೃದಯಾಘಾತ – ಚಾಲಕ ಸಾವು