ಬೀದರ್: ಮನೆ ಕಳ್ಳತನಕ್ಕಾಗಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ದರೋಡೆ ಮಾಡಿರುವ ಪ್ರಕರಣ ಬೀದರ್ ನಲ್ಲಿ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಶಾಲೆ ಪಕ್ಕದಲ್ಲಿನ ಬಸವರಾಜ ಕಾಶಪ್ಪ ಹೊನ್ನಪ್ಪನವರ ಮನೆಗೆ ಕಳ್ಳರ ತಂಡ ಕನ್ನ ಹಾಕಿದೆ. ಅಲ್ಲದೆ ಮನೆಯಲ್ಲಿರುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದೆ.
ಬಸವರಾಜ ತಮ್ಮ ಪತ್ನಿ ಚಿಕಿತ್ಸೆ ಸಂಬಂಧ ಕಳೆದ 20 ದಿನಗಳಿಂದ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು, ತಡರಾತ್ರಿ ಮನೆಯ ಹಿಂಬದಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿರುವ ಆಲ್ಮರಾ ಸೇರಿದಂತೆ ಎಲ್ಲ ಸ್ಥಳಗಳನ್ನು ಪರಿಶೀಲಿಸಿದ ಕಳ್ಳರು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ಅಲ್ಲದೆ ಗ್ಯಾಸ್ ಮೇಲೆ ಒಗ್ಗರಣೆ, ಅವಲಕ್ಕಿ ಹಾಗೂ ಉಪ್ಪಿಟ್ಟು ಮಾಡಿಕೊಂಡು ಊಟ ಮಾಡಿ ಬಳಿಕ ಕದ್ದು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ಮಂಠಾಳ ಠಾಣೆ ಪಿಎಸ್‍ಐ ಬಸಲಿಂಗಪ್ಪ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಮನೆ ಮಾಲೀಕ ಬಸವರಾಜ್ ಗ್ರಾಮಕ್ಕೆ ಬಂದಾಗ ಮಾತ್ರ ಕಳುವಾದ ವಸ್ತುಗಳ ಬಗ್ಗೆ ನಿಖರವಾದ ಮಾಹಿತಿ ಸಿಗಲಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.