ಬೀದರ್: ಡೆಡ್ಲಿ ಕೊರೊನಾ ವೈರಸ್, ಹಕ್ಕಿಜ್ವರ, ಹಂದಿಜ್ವರದ ಬೆನ್ನಲ್ಲೇ ಈಗ ಗಡಿ ಜಿಲ್ಲೆ ಬೀದರ್‌ನ ಜನರಿಗೆ ಚಿಕನ್ ಗುನ್ಯಾ ಭಯ ಶುರುವಾಗಿದೆ.
ಬುಧವಾರ ಹುಮ್ನಮಾದ್ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಹಂದಿ ಜ್ವರದಿಂದ 200ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಇಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಗ್ರಾಮದ 20ಕ್ಕೂ ಹೆಚ್ಚು ಜನರಿಗೆ ಏಕಾಏಕಿ ಜ್ವರ, ಕಾಲು ಹಾಗೂ ಕೈ ನೋವು ಕಾಣಿಸಿಕೊಳ್ಳುವ ಮೂಲಕ ಚಿಕನ್ ಗುನ್ಯಾ ಲಕ್ಷಣಗಳು ಪತ್ತೆಯಾಗಿವೆ.
Advertisement
Advertisement
ಈಗಾಗಲೇ ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಆರೋಗ್ಯಾಧಿಕಾರಿಗಳು ಗ್ರಾಮದ 20ಕ್ಕೂ ಹೆಚ್ಚು ಜನರ ರಕ್ತ ಮಾದರಿಯನ್ನು ಬ್ರೀಮ್ಸ್ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದಾರೆ. ಇನ್ನು ಕೆಲವರಿಗೆ ಹತ್ತಿರದಲ್ಲಿರುವ ವಡಗಾಂವ್ ಪ್ರಾಥರ್ಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳಿಂದ ಗ್ರಾಮದಲ್ಲಿ ಜ್ವರ ಹಾಗೂ ನೋವಿನಿಂದ ಜನರು ಭಯಗೊಂಡಿದ್ದರೂ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈಗಾಗಲೇ ಪ್ರಯೋಗಾಲಯಕ್ಕೆ ರಕ್ತ ಮಾದರಿಯನ್ನು ಕಳಿಸಿಕೊಡಲಾಗಿದೆ. ವರದಿ ಬಂದ ಬಳಿಕ ಚಿಕನ್ ಗುನ್ಯಾ ಬಗ್ಗೆ ಖಚಿತ ಮಾಹಿತಿ ನೀಡುತ್ತೇವೆ ಎಂದು ಪಬ್ಲಿಕ್ ಟಿವಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಯ್ಯ ಸ್ವಾಮಿ ಮಾಹಿತಿ ನೀಡಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರಿಗೆ ಚಿಕನ್ ಗುನ್ಯಾ ಲಕ್ಷಣಗಳು ಏಕಾಏಕಿ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಜನರನ್ನು ಮೊತ್ತೊಮ್ಮೆ ಆತಂಕಕ್ಕೆ ದೂಡಿದೆ.