ಬೆಂಗಳೂರು: ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಬಿಬಿಎಂಪಿ ಮೇಯರ್ ಪಟ್ಟ ಒಲಿಯದೇ ಹೋಯಿತು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಈ ಬಾರಿ ಕನ್ನಡಿಗರನ್ನೇ ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಟ್ಟಿ ನಿಲುವು ತಾಳಿದ್ದರು. ಆದರೆ ದೆಹಲಿಯಲ್ಲಿ ಕುಳಿತು ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಈ ಪಟ್ಟ ಒಲಿಯದೇ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾ ಪೌರ ಸ್ಥಾನಕ್ಕೆ ಈ ಬಾರಿ ಕನ್ನಡಿಗರನ್ನೇ ಆಯ್ಕೆ ಮಾಡ ಬೇಕು ಎಂದು @BSYBJP ಗಟ್ಟಿ ನಿಲುವು ತಾಳಿದ್ದರು.ಆದರೆ ದೆಹಲಿಯಲ್ಲಿ ಕುಳಿತು ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಈ ಪಟ್ಟ ಒಲಿಯದೇ ಹೋಯಿತು.@tv9kannada @publictvnews @suvarnanewstv
— Bhimashankar Patil ???????? ಭೀಮಾಶಂಕರ ಪಾಟೀಲ್ (@bhimashankarptl) October 1, 2019
ಇಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದರೂ ಅಧಿಕಾರದಿಂದ ವಂಚಿತಗೊಂಡಿದ್ದ ಬಿಜೆಪಿ ಈ ಬಾರಿ ಬಿಬಿಎಂಪಿ ಮೇಯರ್ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಒಟ್ಟು 129 ಮತಗಳನ್ನು ಪಡೆಯುವ ಮೂಲಕ ಜೋಗುಪಾಳ್ಯ ವಾರ್ಡಿನ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆ ಆಗಿದ್ದರೆ, ಬೊಮ್ಮನಹಳ್ಳಿ ವಾರ್ಡಿನ ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕೊನೆ ಕ್ಷಣದಲ್ಲಿ ಪಕ್ಷೇತರ ಪಾಲಿಕೆ ಸದಸ್ಯರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಪರಿಣಾಮ ಮೇಯರ್ ಹುದ್ದೆ ಕೈ ತಪ್ಪಿತ್ತು. ಆದರೆ ಈ ಬಾರಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರವನ್ನು ಹಿಡಿದಿದೆ.
ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ 257 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರೂ 249 ಮಂದಿ ಹಾಜರಾಗಿದ್ದರು. 8 ಮಂದಿ ಗೈರಾಗಿರುವ ಕಾರಣ ಬಹುಮತಕ್ಕೆ 125 ಸದಸ್ಯರ ಬೆಂಬಲ ಬೇಕಿತ್ತು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.