ಕಾರವಾರ: ಇತ್ತೀಚಿನ ದಿನಗಳಲ್ಲಿ ಶಾಂತವಾಗಿದ್ದ ಭಟ್ಕಳ(Bhatkal) ನಗರದಲ್ಲಿ ಮತ್ತೆ ಕೋಮು ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. ಹಿಂದೂ ಯುವತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವಕನನ್ನು ಪ್ರಶ್ನಿಸಿ, ಪೊಲೀಸರಿಗೆ ಒಪ್ಪಿಸಿದ್ದ ಹಿಂದೂ ಮುಖಂಡರ ಮೇಲೆಯೇ ಪ್ರಕರಣ ದಾಖಲಾಗಿರುವುದನ್ನು ಖಂಡಿಸಿ ನೂರಾರು ಹಿಂದೂ ಕಾರ್ಯಕರ್ತರು ಭಟ್ಕಳ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಮುಸ್ಲಿಂ (Muslim) ಯುವಕನೊಬ್ಬ ಹಿಂದೂ (Hindu Girl) ಯುವತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ಈ ವೇಳೆ ಅನುಮಾನಗೊಂಡ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ. “ನೀವಿಬ್ಬರೂ ಎಲ್ಲಿಗೆ ಹೋಗುತ್ತಿದ್ದೀರಾ? ಭಟ್ಕಳದಿಂದ ಸಾಗರದ ಕಾಡಿನ ಕಡೆಗೆ ನಿಮಗೆ ಏನು ಕೆಲಸ?” ಎಂದು ಮುಖಂಡರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಹಿಂದೂ ಮುಖಂಡರ ಪ್ರಶ್ನೆಗೆ ಕಾರಿನಲ್ಲಿದ್ದವರಿಂದ ಸೂಕ್ತ ಮತ್ತು ಸರಿಯಾದ ಉತ್ತರ ಬಾರದ ಹಿನ್ನೆಲೆಯಲ್ಲಿ, ವಿಷಯ ಗಂಭೀರವೆಂದು ಪರಿಗಣಿಸಿದ ಮುಖಂಡರು ಇಬ್ಬರನ್ನೂ ಭಟ್ಕಳ ಶಹರ ಪೊಲೀಸ್ ಠಾಣೆಗೆ ಕರೆತಂದು ಬುದ್ಧಿ ಹೇಳುವಂತೆ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಯುವಕ ಮತ್ತು ಯುವತಿಯನ್ನು ಠಾಣೆಗೆ ಒಪ್ಪಿಸಿದ ಹಿಂದೂ ಮುಖಂಡರ ವಿರುದ್ಧವೇ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಹಿಂದೂ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಟ್ಕಳ ಶಹರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೂರಾರು ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಸರ್ಕಾರದ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖಂಡರ ಮೇಲಿನ ಕೇಸ್‌ನಿಂದಾಗಿ ಭಟ್ಕಳದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಠಾಣೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
