ಮುಂಬೈ: 2011ರ ವಿಶ್ವಕಪ್ ತಂಡದಲ್ಲಿ ಆಡಿದ್ದ ಮುನಾಫ್ ಪಟೇಲ್ ಅಂತರಾಷ್ಟ್ರೀಯ ಮಟ್ಟದ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಬೆನ್ನಲ್ಲೇ ಮುನಾಫ್ ಪಟೇಲ್, ಸಚಿನ್ ತೆಂಡೂಲ್ಕರ್ ಅವರಿಂದ ಮೆಚ್ಚುಗೆ ಪಡೆದಿದ್ದರು. 2003 ರಲ್ಲಿ ರಾಜ್‍ಕೋಟ್‍ನಲ್ಲಿ ನಡೆದ ಟೀಂ ಇಂಡಿಯಾ ಎ ತಂಡದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮುನಾಫ್ ಪಟೇಲ್ ಆಡಿದ್ದರು. 2006ರಲ್ಲಿ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾದಾರ್ಪಣೆ ಮಾಡಿದ್ದರು.
ವೃತ್ತಿ ಜೀವನದಲ್ಲಿ ಗಾಯದ ಸಮಸ್ಯೆಗಳಿಂದಲೇ ಹಲವು ಬಾರಿ ತಂಡದಿಂದ ಹೊರಗುಳಿದಿದ್ದ ಮುನಾಫ್, 13 ಟೆಸ್ಟ್, 70 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಿದ್ದಾರೆ. 2011 ರಲ್ಲಿ ಕೊನೆಯ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಬಲಗೈ ವೇಗಿಯಾಗಿದ್ದ ಮುನಾಫ್ ಸದ್ಯ ಆರಂಭವಾಗಲಿರುವ ಟಿ10 ಲೀಗ್‍ನಲ್ಲಿ ಭಾಗವಹಿಸುತ್ತಿದ್ದಾರೆ. ಟೂರ್ನಿಯಲ್ಲಿ ರಾಜಪೂತ್ಸ್ ತಂಡದ ಪರ ಮುನಾಫ್ ಪಟೇಲ್ ಸ್ಥಾನ ಪಡೆದಿದ್ದಾರೆ.
ತಮ್ಮ ನಿವೃತ್ತಿಯ ಘೋಷಣೆ ಬಳಿಕ ಮಾತನಾಡಿದ ಮುನಾಫ್ ಪಟೇಲ್, ನಿವೃತ್ತಿ ಘೋಷಣೆ ಮಾಡಿರುವ ಬಗ್ಗೆ ನನಗೆ ವಿಷಾದ ಇಲ್ಲ. ಏಕೆಂದರೆ ನನ್ನೊಂದಿಗೆ ಆಡಿದ್ದ ಧೋನಿ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಈಗಾಗಲೇ ನಿವೃತ್ತಿ ನೀಡಿದ್ದಾರೆ. ಎಲ್ಲಾ ಆಟಗಾರರು ವೃತ್ತಿ ಜೀವನಕ್ಕೆ ಒಂದಲ್ಲಾ ಒಂದು ದಿನ ನಿವೃತ್ತಿ ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯುವ ಆಟಗಾರರು ಅವಕಾಶ ಪಡೆಯಲು ಕಾದುಕುಳಿತ್ತಿದ್ದಾರೆ. ಇಂತಹ ವೇಳೆಯಲ್ಲಿ ನಿವೃತ್ತಿ ನೀಡದೆ ಇರುವುದು ಉತ್ತಮ ನಡೆ ಎನಿಸಿಕೊಳ್ಳುವುದಿಲ್ಲ. ನಾನು ನಿವೃತ್ತಿ ಹೇಳಲು ವಯಸ್ಸಿನ ಕಾರಣ ಬಿಟ್ಟು ಬೇರೆ ಯಾವ ಅಂಶಗಳು ಇಲ್ಲ. 2011ರ ವಿಶ್ವಕಪ್ ತಂಡದ ಭಾಗವಾಗಿದ್ದೇ ಎಂಬುವುದು ನನಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.
ವಿಶ್ವಕಪ್ ಅಂತಿಮ ಓವರ್: ಮುನಾಫ್ ಪಟೇಲ್ ಅವರ ವೃತ್ತಿ ಜೀವನದಲ್ಲಿ 2011ರ ವಿಶ್ವಕಪ್ ನ ಇಂಗ್ಲೆಂಡ್ ವಿರುದ್ಧ ಮಾಡಿದ ಅಂತಿಮ ಓವರ್ ಸ್ಮರಣಿಯ ಘಟನೆಯಾಗಿದೆ. ಈ ಓವರಿನಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲು 14 ರನ್ ಗಳ ಅಗತ್ಯವಿತ್ತು. ಆದರೆ ಅಂದು ಬಾಲ್ ಪಡೆದು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಮುನಾಫ್ ಮೊದಲ ಮೂರು ಎಸೆತಗಳಲ್ಲಿ 9 ರನ್ ನೀಡಿದ್ದರು. ಈ ಹಂತದಲ್ಲಿ ತಂಡ ಸೋಲು ಖಚಿತ ಎಂದು ಹಲವರು ಭಾವಿಸಿದ್ದರು. ಆದರೆ ಉಳಿದ 3 ಎಸೆತಗಳಲ್ಲಿ 4 ರನ್ ಮಾತ್ರ ನೀಡಿ ಪಂದ್ಯ ಟೈ ಆಗುವಂತೆ ಮಾಡಿದ್ದರು.
ಮುನಾಫ್ ಪಟೇಲ್ ತಮ್ಮ ವೃತ್ತಿ ಜೀವನದಲ್ಲಿ ಬರೋಡಾ, ಗುಜರಾತ್, ಮಹಾರಾಷ್ಟ್ರ ತಂಡಗಳಲ್ಲಿ ಆಡಿದ್ದು, ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಾಯನ್ಸ್ ಪರ ಆಡಿದ್ದರು. ಉಳಿದಂತೆ ಮುನಾಫ್ ಟೆಸ್ಟ್ ಕ್ರಿಕೆಟ್‍ನಲ್ಲಿ 35 ವಿಕೆಟ್, ಏಕದಿನ ಮಾದರಿಯಲ್ಲಿ 86, ಟಿ20 ಕ್ರಿಕೆಟ್‍ನಲ್ಲಿ 4 ವಿಕಟ್ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews