ಜೈಪುರ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ ಯುವಕರಿಗೆ 30 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಘೋಷಿಸಿದ್ದಾರೆ.
ರಾಜಸ್ಥಾನದ ಬನ್ಸ್ವಾರಾದಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatre) ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಕರು, ಬಡವರು ಮತ್ತು ಇತರ ವರ್ಗಗಳಿಗೆ ಪಕ್ಷದ ಉದ್ದೇಶಿತ ಕಾರ್ಯಕ್ರಮಗಳ ಬಗ್ಗೆ ಉಲ್ಲೇಖಿಸಿದರು.
Advertisement
ಕಾಂಗ್ರೆಸ್ ಪಕ್ಷವು (Congress Party) ಯುವಕರಿಗಾಗಿ ಏನು ಮಾಡಲು ಹೊರಟಿದೆ ಅಂದರೆ ಮೊದಲನೆಯದಾಗಿ, ಭಾರತದಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ತುಂಬಿಲ್ಲ. ಬಿಜೆಪಿಯವರು ಅದನ್ನೂ ತುಂಬುವುದಿಲ್ಲ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಮಾಡುವ ಮೊದಲ ಕೆಲಸವೆಂದರೆ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದಾಗಿದೆ ಎಂದರು.
Advertisement
Advertisement
ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಘೋಷಿಸಿದರು. ಈ ಶಿಷ್ಯವೇತನದ ಅಡಿಯಲ್ಲಿ ಯುವಕರಿಗೆ ಒಂದು ವರ್ಷ ತರಬೇತಿ ನೀಡಲಾಗುವುದು. ತರಬೇತಿ ಸಮಯದಲ್ಲಿ ರೂ.1 ಲಕ್ಷ ಸ್ಟೈಫಂಡ್ ನೀಡಲಾಗುವುದು ಎಂದರು. ಇದನ್ನೂ ಓದಿ: ನರೇಂದ್ರ ಮೋದಿ ಮುಂದಿನ 10 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ಮಾಡ್ತಾರೆ: ಅಮಿತ್ ಶಾ
Advertisement
ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ‘ಯುವ ರೋಶನಿ’ ಅಡಿಯಲ್ಲಿ ಜಿಲ್ಲೆಗಳಲ್ಲಿ ಸ್ಟಾರ್ಟ್‌ಅಪ್ ಆರಂಭಿಸುವುದಾಗಿ ಭರವಸೆ ನೀಡಿದರು. ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಬಯಸುವ ಯುವಕರನ್ನು ಬೆಂಬಲಿಸಲು ನಾವು 5000 ಕೋಟಿ ರೂಪಾಯಿಗಳ ಆರಂಭಿಕ ನಿಧಿಯನ್ನು ರಚಿಸುತ್ತೇವೆ. ಈ ಸ್ಟಾರ್ಟಪ್ ದೇಶದ ಪ್ರತಿಯೊಂದು ಜಿಲ್ಲೆಗೂ ತಲುಪಲಿದೆ. ಜೊತೆಗೆ ಪೇಪರ್ ಸೋರಿಕೆ ಬಗ್ಗೆ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಪೇಪರ್ ಸೋರಿಕೆ ಪ್ರಕರಣಗಳನ್ನು ತಡೆಯಲು ಕಾಂಗ್ರೆಸ್ ಕಾನೂನು ತರಲಿದೆ ಎಂದು ರಾಹುಲ್ ಹೇಳಿದರು.
ರೈತರಿಗೂ ಭರವಸೆ: ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿಯನ್ನು ನೀಡುತ್ತದೆ. ನೀರು ಮತ್ತು ಅರಣ್ಯಕ್ಕಾಗಿ ಆದಿವಾಸಿಗಳ ಹೋರಾಟ ನಮ್ಮ ಹೋರಾಟವಾಗಿದೆ. ನಿಮ್ಮೊಂದಿಗೆ ನಾವಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರ ಪರ ಕಾಳಜಿ ವಹಿಸುವ ಕೆಲಸ ಮಾಡಿದೆ ಎಂದರು.