ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರೆ ನೀಡಲಾಗಿದ್ದ ಭಾರತ್ ಬಂದ್ ಬೆಂಬಲಿಸಲು ಬಂದಿದ್ದ 100ಕ್ಕೂ ಹೆಚ್ಚು ರೈತರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ.
ಮೌರ್ಯ ಸರ್ಕಲ್‍ನಲ್ಲಿ ಒಂದುಗೂಡಿ ವಿನೂತನ ರೀತಿಯ ಮೆರವಣಿಗೆ ನಡೆಸಲು ರೈತರು ಯತ್ನಿಸಿದ್ದಾರೆ. ಈ ವೇಳೆ ರೈತ ಮುಖಂಡರನ್ನು ಬಂಧಿಸಲು ಯತ್ನಿಸಿದಾಗ ಪೊಲೀಸರು ಹಾಗೂ ರೈತರ ನಡುವೆ ಭಾರಿ ವಾಗ್ವಾದ ನಡೆಯಿತು. ಏಕೆ ಬಂಧನ ಮಾಡುತ್ತೀರಿ, ನಾವು ಮೆರವಣಿಗೆಯನ್ನೇ ಆರಂಭಿಸಿಲ್ಲ, ನಮ್ಮ ರೈತರು ಬರುತ್ತಿದ್ದಾರೆ. ಅಲ್ಲಿ ತನಕ ಊರಿನಿಂದ ತಂದಿರುವ ತಿಂಡಿಯನ್ನು ತಿಂದು ಮುಂದೆ ಸಾಗುತ್ತೇವೆ ಎಂದು ರೈತರು ಪೊಲೀಸರ ಬಳಿ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ
Advertisement
ಇದಕ್ಕೆ ಅವಕಾಶ ನೀಡದ ಪೊಲೀಸರು, ಯಾವುದೇ ಪ್ರತಿ ಉತ್ತರ ನೀಡದೆ ರೈತರನ್ನು ಬಂಧಿಸಿದರು. ಪೊಲೀಸರ ಈ ನಡೆಯನ್ನು ಖಂಡಿಸಿದ ಕುರುಬೂರು ಶಾಂತಕುಮಾರ್, ಕಾನೂನುಬಾಹಿರ ಕ್ರಮಗಳನ್ನ ಕೈಗೊಳ್ಳುತ್ತಿರುವುದು ಪೊಲೀಸರ ಸರ್ವಾಧಿಕಾರಿ ಧೋರಣೆಯಾಗಿದೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ. ಕೇಂದ್ರದ ಕೆಲವು ಮಂತ್ರಿಗಳು ರೈತ ಚಳುವಳಿಯ ಬಗ್ಗೆ ಹಗುರವಾಗಿ ಕೋಲೆ ಬಸವನ ರೀತಿ ಮಾತನಾಡುತ್ತಿದ್ದಾರೆ. ಇವರಿಗೆ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ಅರಿವೇ ಇಲ್ಲ ಬೇಕಿದ್ದರೆ ರೈತ ಮುಖಂಡರ ಸಭೆ ಕರೆದು ಚರ್ಚಿಸಲಿ ಎಂದು ಬಹಿರಂಗ ಸವಾಲು ಹಾಕಿದರು. ಇದನ್ನೂ ಓದಿ: ತಪ್ಪು ಕಲ್ಪನೆಗಳಿಂದ ಭಾರತ್ ಬಂದ್ ಕರೆ ನೀಡಲಾಗಿದೆ: ಲಕ್ಷ್ಮಣ್ ಸವದಿ
Advertisement
ರೈತರು ಉತ್ಪನ್ನಗಳನ್ನ ಎಲ್ಲಿ ಬೇಕಾದರೂ ಯಾರಿಗಾದರೂ ಮಾರಾಟ ಮಾಡಬಹುದು ಎನ್ನುತ್ತಾರೆ. ನಾವು ವಿಧಾನಸೌಧಕ್ಕೆ ಹಣ್ಣು ತರಕಾರಿಗಳನ್ನ ಮಾರಲು ಹೋಗುತ್ತಿದ್ದರೆ ಪೊಲೀಸರೇ ತಡೆಯುತ್ತಿದ್ದಾರೆ. ಇಂತಹ ನಡೆ ರೈತರ ಕಣ್ಣಿಗೆ ಮಣ್ಣೆರಚುವ ಕೇಂದ್ರ ಸರ್ಕಾರದ ಕುತಂತ್ರವಲ್ಲವೇ ಎಂದು ಕಿಡಿಕಾರಿದರು. ವಿಧಾನಸೌಧ ಬಳಿ ಎತ್ತಿನಗಾಡಿ ಕುದುರೆಗಾಡಿ ಪ್ರತಿಭಟನೆ ನಡೆಸುವಾಗ ಯಾವುದನ್ನೂ ಕೇಳದ ಪೊಲೀಸರು, ನಮ್ಮನ್ನ ಮಾತ್ರ ಅನುಮತಿ ಪಡೆಯಲಾಗಿದೆಯೇ ಎಂದು ಕೇಳುತ್ತಾರೆ. ಇದು ಪೊಲೀಸರ ಕಾರ್ಯವೈಖರಿ ಎಂದು ವ್ಯಂಗ್ಯವಾಡಿದರು.
Advertisement
ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನವೆಂಬರ್ 26ಕ್ಕೆ ಹೋರಾಟಕ್ಕೆ ಒಂದು ವರ್ಷ ತುಂಬುತ್ತದೆ. ಆಗ ದೇಶದ ಎಲ್ಲಾ ರಾಜ್ಯಗಳಿಂದ 5 ಕೋಟಿಗೂ ಹೆಚ್ಚು ರೈತರು ದೆಹಲಿ ಪ್ರವೇಶ ಮಾಡುತ್ತಾರೆ. ಸರ್ಕಾರದ ಯಾವುದೇ ಕುತಂತ್ರದ ಕಾರ್ಯತಂತ್ರಗಳಿಗೂ ನಾವು ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.
Advertisement
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ರೈತರು ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸರ್ಕಾರ ಪೊಲೀಸ್ ಬಲದ ಮೂಲಕ ಯತ್ನಿಸುತ್ತಿದೆ. ಪೊಲೀಸರು ಕಾನೂನು ಪಾಲಕರಾಗದೇ ಮಂತ್ರಿಗಳ ಗುಲಾಮರ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
ನೂರಕ್ಕೂ ಹೆಚ್ಚು ರೈತರನ್ನು ಪೊಲೀಸರು ಆಡುಗೋಡಿ ಪೊಲೀಸ್ ಮೈದಾನಕ್ಕೆ ಕರೆದೊಯ್ದಾಗ ಅಲ್ಲಿ ರೈತರು 1 ಗಂಟೆ ಕಾಲ ಬಸ್ಸಿನಿಂದ ಕೆಳಗೆ ಇಳಿಯದೆ ಪೊಲೀಸರ ಕಾನೂನುಬಾಹಿರ ವರ್ತನೆಯನ್ನ ಖಂಡಿಸಿದ್ದಾರೆ. 3 ಗಂಟೆ ನಂತರ ಬಂಧಿತ ರೈತರು, ರೈತ ಮಹಿಳೆಯರು, ಬೀದಿ ಬದಿ ವ್ಯಾಪಾರಿಗಳನ್ನು ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಅಂದಪ್ಪ ಕೊಳೂರ, ಬೆಂಗಳೂರು ನಗರಾಧ್ಯಕ್ಷೆ ಶಿವಮ್ಮ, ಚನ್ನರಾಯಪಟ್ಟಣದ ಪ್ರೇಮ, ಮೈಸೂರು ಜಿಲ್ಲೆಯ ನಾಗರಾಜ್, ಪ್ರಜಾ ಪರಿವರ್ತನಾ ವೇದಿಕೆಯ ಗೋವಿಂದರಾಜು ಹೆಸರಘಟ್ಟ, ಶಿವರುದ್ರಪ್ಪ ಇನ್ನು ಮುಂತಾದವರಿದ್ದರು.