ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಆರೋಪಿಸಿದ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್‍ಗೆ ಶಾಸಕ ಭೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಕೇಶ್ ನನ್ನ ತಮ್ಮನಿಂದ್ದಂತೆ ಅವರ ಸಾವಿಗೆ ನಾನೇಕೆ ಕಾರಣವಾಗಲಿ? ಒಂದು ಸಾವನ್ನ ರಾಜಕೀಯವಾಗಿ ಬಳಸಿಕೊಂಡು ಎಂಟಿಬಿ ನಾಗರಾಜ್ ಹತಾಶೆ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಯಾರನ್ನಾದರೂ ಕುಡಿಸಿ ಸಾಯಿಸೋಕೆ ಆಗುತ್ತಾ? ರಾಕೇಶ್ ಕುಡಿದು ಸಾವನ್ನಪ್ಪಿದ್ದು ಎಂದು ಅವರಿಗೆ ಯಾರು ಹೇಳಿದ್ದು? ರಾಕೇಶ್ ಸಾವಿನ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು. ಮೂರನೇ ವ್ಯಕ್ತಿ ಎಂಟಿಬಿ ನಾಗರಾಜ್‍ಗೆ ಯಾವ ಹಕ್ಕಿದೆ ಎಂದು ಕಿಡಿಕಾರಿದ್ದಾರೆ.
ನಾನು ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾಗ ಎಂಟಿಬಿ ಎಲ್ಲಿದ್ದರು ಎನ್ನುವುದನ್ನು ತಿಳಿದುಕೊಳ್ಳಲಿ. ಗ್ರಾ. ಪಂ ಸದಸ್ಯನಿಂದ ಹಿಡಿದು ಈಗ ಶಾಸಕನಾಗಿದ್ದೇನೆ. ನಾನೇನು ಬಚ್ಚಾ ಅಲ್ಲ, ಬೇರೆ ಮನೆಯಿಂದ ಬಂದು ಕಾಂಗ್ರೆಸ್ಸಿನಲ್ಲಿ ವಾಸ ಮಾಡಿಲ್ಲ. ನೀವು ಮಾಡುತ್ತಿರುವುದು ಏನು? ಹೊಸಕೋಟೆಯಲ್ಲಿ ಬಚ್ಚೇಗೌಡ ಅವರು ಕಟ್ಟಿ ಬೆಳೆಸಿದ ಮನೆಯಲ್ಲಿ ನೀವು ವಾಸ ಮಾಡಲು ಹೋಗುತ್ತಿರುವುದು ಎಷ್ಟು ಸರಿ? ಸಿದ್ದರಾಮಯ್ಯ ಅವರನ್ನು ಟೀಕಿಸಲು ನಿಮಗೆ ಯಾವುದೇ ನೈತಿಕತೆ ಇಲ್ಲ. ನಿಮ್ಮ ಬಂಡವಾಳ ನೀವು ನಡೆಸಿರುವ ಹಗರಣಗಳ ಬಗ್ಗೆ ನಮಗೂ ಗೊತ್ತಿದೆ ಎಂದು ಎಂಟಿಬಿಗೆ ವಿರುದ್ಧ ಹರಿಹಾಯ್ದಿದ್ದಾರೆ.
ಎಂಟಿಬಿ ಹೇಳಿದ್ದೇನು?
ಭೈರತಿ ಸುರೇಶ್ ಬಡ್ಡಿ ವಸೂಲಿ ಆರೋಪಕ್ಕೆ ಎಂಟಿಬಿ ತಿರುಗೇಟು ನೀಡಿ, ರಾಜಕೀಯದಲ್ಲಿ ಅವನು ಬಚ್ಚಾ, ಆತನ ಬಂಡವಾಳ ನನಗೆ ಗೊತ್ತು. ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದವನನ್ನು ಸಾಯಿಸಿದ್ದು ನನಗೆ ಗೊತ್ತಿದೆ ಎಂದು ಆರೋಪಿಸಿದ್ದರು.