– 8 ವರ್ಷಗಳ ಬಳಿಕ ಕಾಮಗಾರಿ ಪೂರ್ಣ
ಮಡಿಕೇರಿ: ಅತಿ ಹೆಚ್ಚು ಮಳೆ ಬಂದ ಸಂದರ್ಭ ದ್ವೀಪವಾಗಿ ಇಡೀ ಊರಿನ ಸಂಪರ್ಕ ಕಳೆದುಕೊಳ್ಳುವುದರೊಂದಿಗೆ ಗ್ರಾಮಸ್ಥರ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ, ಈ ಬಾರಿಯ ಮಳೆಗಾಲಕ್ಕೆ ಜನರಿಗಿದ್ದ ಆತಂಕ ದೂರವಾಗಿದೆ. ಭಾಗಮಂಡಲದಲ್ಲಿ (Bhagamandala) ನಿರ್ಮಾಣವಾಗಿರುವ ಕೊಡಗಿನ (Kodagu) ಏಕೈಕ ಮೇಲು ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಸುಮಾರು 8 ವರ್ಷಗಳ ಬಳಿಕ ಕಾಮಗಾರಿ ಪೂರ್ಣವಾಗಿ ಮುಕ್ತಾಯಗೊಂಡಿದೆ. ಶುಕ್ರವಾರ (ಜ.31) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸೇತುವೆಯನ್ನು ಲೋಕಾರ್ಪಣೆ ಮಾಡಲ್ಲಿದ್ದಾರೆ.
ಪ್ರತಿ ವರ್ಷ ಭಾರೀ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಭಾಗಮಂಡಲ ಜಲಾವೃತವಾಗುವುದು ಸರ್ವೇ ಸಾಮಾನ್ಯವಾಗಿತ್ತು. ಇದರಿಂದ ತ್ರಿವೇಣಿ ಸಂಗಮ ಮುಳುಗಡೆಯಾಯಿತೆಂದರೆ ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಅನುಭವಿಸುತ್ತಿದ್ರು.
ಅಲ್ಲದೇ 2018ರಿಂದ ಈ ಭಾಗದಲ್ಲಿ ಪ್ರವಾಹ ಮತ್ತು ಭೂಕುಸಿತ ಸಾಮಾನ್ಯವಾಗಿದೆ. 2018ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಭಾಗಮಂಡಲದಲ್ಲಿ ಮೇಲ್ಸೇತುವೆ ಮಾಡುವುದಾಗಿ ಘೋಷಿಸಿದ್ದರು. ನಂತರ ಸುಮಾರು 34 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಒಂದು ವರ್ಷದೊಳಗೆ ಮುಗಿಯಬೇಕಾಗಿದ್ದ ಮೇಲ್ಸೇತುವೆ ಕಾಮಗಾರಿ 8 ವರ್ಷ ಕಳೆದರೂ ಕೂಡ ಪೂರ್ಣಗೊಂಡಿರಲಿಲ್ಲ. ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡಿದ್ದ ಪರಿಣಾಮ ಪ್ರತಿ ಮಳೆಗಾಲದ ಸಮಯದಲ್ಲೂ ನಿಮ್ಮ ಪಬ್ಲಿಕ್ ಟಿವಿ ಇಲ್ಲಿನ ಜನರ ಸಮಸ್ಯೆ ಬಗ್ಗೆ ವರದಿ ಪ್ರಸಾರ ಮಾಡಿಕೊಂಡೇ ಬರುತ್ತಿತ್ತು. ಅಲ್ಲದೇ ಮಳೆಗಾಲದ ಸಂದರ್ಭ ಭಾಗಮಂಡಲದಲ್ಲಿ ಪ್ರವಾಹ ಉಂಟಾಗಿ ಬೋಟ್ ಗಳ ಮೂಲಕ ಜನರನ್ನು ಸಾಗಿಸಲಾಗುತ್ತಿತ್ತು. ಇದಲ್ಲದೆ ಜೀವ ಕೈಯಲ್ಲಿಡಿದು ಪ್ರವಾಹ ನೀರಿನಲ್ಲೇ ಗ್ರಾಮಸ್ಥರು ನಡೆದಾಡುವ ಪರಿಸ್ಥಿತಿ ಬಗ್ಗೆ ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ನಿರಂತರ ವರದಿಯಿಂದ ಎಚ್ಚೆತ್ತ ಸರ್ಕಾರ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಇದೀಗ ಸೇತುವೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾಗಮಂಡಲದ ಗ್ರಾಮಸ್ಥರು ಪಬ್ಲಿಕ್ ಟಿವಿ ಮುಂದೆ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನ 3:30ರ ಸುಮಾರಿಗೆ ಸೇತುವೆ ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕೂ ಮೊದಲು ತಲಕಾವೇರಿಗೆ ತೆರಳಿ ನಾಡಿನ ಸುಭೀಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಕಾನೂನು ಸಲಹೆಗಾರ ಎ.ಎಸ್ ಪೋನ್ನಣ್ಣ ಮಾತಾನಾಡಿ, ಭಾಗಮಂಡಲದ ಮೇಲೂ ಸೇತುವೆ 30 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ಚಾಲನೆಯನ್ನು ಕೆ.ಜೆ ಜಾರ್ಜ್ ಅವರು ಕೊಟ್ಟಿದ್ರು. ಆದ್ರೆ ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಆದ್ರೆ ತಾನು ಶಾಸಕ ಅದ ಬಳಿಕ ಅದಕ್ಕೆ ಬೇಕಾದ ಹಣವನ್ನು ತಂದು ಸೇತುವೆ ಪೂರ್ಣ ಮಾಡಿದೇವೆ. ತ್ರಿವೇಣಿ ಸಂಗಮದಲ್ಲಿ ಉದ್ಯಾನವನ ಮಾಡಿದೇವೆ ಅದನ್ನು ಎರಡು ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲ್ಲಿದ್ದಾರೆ. ಜೊತೆಗೆ ಎಂ.ಬಿ ಪಾಟೀಲ್, ಕೆ.ಜೆ ಜಾರ್ಜ್, ಡಿ.ಕೆ ಶಿವಕುಮಾರ್ ಆಗಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.