ಬೆಂಗಳೂರು: ಕಬ್ಬನ್ ಪಾರ್ಕ್ ಮತ್ತು ಸುತ್ತ ಮುತ್ತಲಿನ ಹಡ್ಸನ್ ರಸ್ತೆಯಲ್ಲಿ ಸಂಚರಿಸುವವರು ಇನ್ಮುಂದೆ ಎಚ್ಚರಿಕೆಯಿಂದ ಸಂಚರಿಸಿ. ಯಾಕಂದ್ರೆ ರಾಜ್ಯ ತೋಟಗಾರಿಕ ಇಲಾಖೆ ಈ ಸ್ಥಳವನ್ನು ಡೇಂಜರ್ ಸ್ಪಾಟ್ ಎಂದು ಗುರುತಿಸಿದೆ.
ಕಬ್ಬನ್ ಪಾರ್ಕ್‍ನ ಸುತ್ತಲು ಸುಮಾರು 90ಕ್ಕೂ ಹೆಚ್ಚು ವಯಸ್ಸಾದ ಮರಗಳನ್ನು ಗುರುತಿಸಿದ್ದು, ಅವುಗಳ ತೆರವಿಗೆ ಅನುಮತಿಗಾಗಿ ಕಾದು ಕುಳಿತಿದೆ. ಆದರೆ ಅನುಮತಿ ಪತ್ರ ಮಾತ್ರ ಇನ್ನೂ ಲಭಿಸಿಲ್ಲ. ಮರ ಕಡಿಯೋದಕ್ಕೆ ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಅನುಮತಿ ಗಾಗಿ ಬಿಬಿಎಂಪಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ರೂ ಇಲಾಖೆ ಸ್ಪಂದಿಸಿಲ್ಲ. ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಘಟಕಗಳ ನಡುವೆ ನಡೆಯುತ್ತಿರುವ ಶೀತಲ ಸಮರವೇ ಅನುಮತಿ ಪತ್ರ ತಡವಾಗಲು ಕಾರಣ ಎನ್ನಲಾಗಿದೆ.
ವಯಸ್ಸಾದ ಹಾಗೂ ಅಪಾಯಕಾರಿ ಮರಗಳನ್ನು ಗುರುತಿಸಲು ಸಮಿತಿಯನ್ನು ನೇಮಕ ಮಾಡಲಾಗಿದ್ದು, ಈ ಕುರಿತು ವರದಿಯನ್ನು ನೀಡಲಾಗಿದೆ. ಪ್ರತಿ ದಿನ ಸಾವಿರಾರು ಜನ ಪಾರ್ಕ್‍ಗೆ ಭೇಟಿ ನೀಡುತ್ತಾರೆ. ಅಲ್ಲದೇ ಲಕ್ಷಾಂತರ ವಾಹನ ಸವಾರರು ಪಾರ್ಕ್‍ನ ಆರು ಗೇಟ್‍ಗಳ ಸುತ್ತಲು ಸಂಚಾರಿಸುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ ಕಬ್ಬನ್ ಪಾರ್ಕ್ ಅಧಿಕಾರಿಗಳು.