-ಸ್ನೇಹ ಬೆಳೆಸಿ, ಸರ್ಕಾರಿ ನೌಕರಿ ಕೊಡಿಸುವುದಾಗಿ ಲಕ್ಷ ರೂ. ನಾಮ
ಕೊಪ್ಪಳ: ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ, ವಂಚಿಸುತ್ತಿದ್ದ ಕಿಲಾಡಿಯನ್ನು ಕೊಪ್ಪಳ (Koppal) ಪೊಲೀಸರು ಬಂಧಿಸಿದ್ದಾರೆ.
Advertisement
ಬಂಧಿತ ಆರೋಪಿಯನ್ನು ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಜೈಭೀಮ್ ಪಡಕೋಟಿ ಎಂದು ಗುರುತಿಸಲಾಗಿದೆ.
Advertisement
ಕನ್ಯೆ, ವರಾನ್ವೇಷಣೆಗೆ ಇರುವ ಮ್ಯಾಟ್ರಿಮೋನಿ ವೆಬ್‌ಸೈಟ್ ಕೂಡ ಈಗ ವಂಚಕರಿಗೆ ವೇದಿಕೆ ಆಗಿದೆ. ಮ್ಯಾಟ್ರಿಮೋನಿಯಲ್ಲಿ ಪರಿಚಯಿಸಿಕೊಂಡು ಮದುವೆ ಆಗುವುದು. ನಂತರ ಯುವತಿ ಕುಟುಂಬದವರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಹಣ ಪೀಕಿ, ಕ್ಯಾನಿನೋದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಕೊಪ್ಪಳ ಜಿಲ್ಲೆಯ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ, ಪೊಲೀಸರು ವಂಚಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನಿಗೆ ಮ್ಯಾಟ್ರಿಮೋನಿ ಆದಾಯದ ಮೂಲ. ಕ್ಯಾಸಿನೋ ಹಣ ಬಳಕೆಯ ವೇದಿಕೆ ಎಂಬ ವಿಷಯ ಬೆಳಕಿಗೆ ಬಂದಿದೆ. ಜೈಭೀಮ್ ವಿರುದ್ದ ರಾಜ್ಯದ 9 ಠಾಣೆಯಲ್ಲಿ ಕೊಲೆ ಸೇರಿ ಮಹಿಳೆಯರಿಗೆ ವಂಚಿಸಿದ 11 ಪ್ರಕರಣ ದಾಖಲಾಗಿವೆ.
Advertisement
Advertisement
ವಂಚನೆ ಮಾಡಿರುವುದು ಹೇಗೆ?
ವಿವಿಧ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಪ್ರೊಪೈಲ್ ಕ್ರಿಯೇಟ್ ಮಾಡಿ, ಸುರ ಸುಂದರನಂತೆ ಫೋಟೋ ಕ್ಲಿಕ್ಕಿಸಿಕೊಂಡು ಭಾವಚಿತ್ರ ಹಾಕುತ್ತಿದ್ದ. ಜೊತೆಗೆ ತಾನು ಕೆಇಬಿಯ ಕ್ಲಾಸ್ ಒನ್ ಸರ್ಕಾರಿ ನೌಕರ ಎಂದು ಹೇಳಿಕೊಂಡು ವಂಚಿಸುತ್ತಿದ್ದ. ಆ್ಯಪ್‌ನಲ್ಲಿ ಅನೇಕ ಯುವತಿಯರ ಪ್ರೊಪೈಲ್ ಚೆಕ್ ಮಾಡಿ, ನಂಬರ್ ಪಡೆದು ವಂಚನೆ ಮಾಡುವುದು ಈತನ ಕಾಯಕ. ಹೀಗೆಯೇ ಕೊಪ್ಪಳ ತಾಲೂಕಿನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ನಂತರ ಅವರ ಕುಟುಂಬದ ಬೆನ್ನು ಬಿದ್ದು 2021ರಲ್ಲಿ ಮದುವೆಯಾಗಿದ್ದನು. ಮದುವೆಯಾಗಿ ಕೆಲ ದಿನಕ್ಕೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ಹೀಗಾಗಿ ಮಹಿಳೆ ತವರು ಮನೆಗೆ ಬಂದು, ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಜೈಭೀಮ್ ವಿರುದ್ದ ದೂರು ನೀಡಿದ್ದಳು. ಕೊಪ್ಪಳ ಮಹಿಳಾ ಠಾಣೆ ಪೊಲೀಸರು ಬಂಧಿಸಿದಾಗ ಈತನ ಅಸಲಿ ಕಥೆ ಗೊತ್ತಾಗಿದೆ.
ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿ ನಾನಾ ಜಿಲ್ಲೆಯ ಯುವತಿಯರನ್ನು ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡಿದ್ದ ಜೈಭೀಮ್, ನಂತರ ಅನೇಕರಿಗೆ ತಾನು ಸ್ವಲ್ಪ ತೊಂದರೆಯಲ್ಲಿದ್ದೇನೆ ಎಂದು ಹೇಳಿ ಹಣ ಪಡೆದುಕೊಂಡಿದ್ದಾನೆ. ಇನ್ನೂ ಅನೇಕರಿಗೆ ನಾನು ಕೆಇಬಿಯಲ್ಲಿ ಪ್ರಮುಖ ಅಧಿಕಾರಿಯಾಗಿದ್ದೇನೆ. ನಿಮಗೆ ಕೆಲಸ ಕೊಡಿಸುತ್ತೇನೆ ಎಂದು ಲಕ್ಷಾಂತರ ರೂ. ಹಣ ಪೀಕಿದ್ದಾನೆ.
ಕೊಪ್ಪಳ ಮಹಿಳೆಗೂ ವಂಚನೆ:
ಹೀಗೆ ಮ್ಯಾಟ್ರಿಮೋನಿಯಲ್ಲಿ ಕೊಪ್ಪಳ ತಾಲೂಕಿನ ಮಹಿಳೆಯನ್ನು ಪರಿಚಯ ಮಾಡಿಕೊಂಡು, ನಾನು ಕೆಇಬಿಯಲ್ಲಿ ದೊಡ್ಡ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ನಂತರ ಯುವತಿಯ ಸಹೋದರನಿಗೆ ನೌಕರಿ ಕೊಡಿಸುವುದಾಗಿ ಹೇಳಿ ಒಟ್ಟು 5 ಲಕ್ಷ ರೂ. ಹಣ ಪಡೆದಿದ್ದಾನೆ. ನಂತರ ಮಹಿಳೆಗೆ ಟಾರ್ಚರ್ ಕೊಡಲು ಆರಂಭಿಸಿದ್ದ. ಈ ನಡುವೆ ಗರ್ಭಿಣಿಯಾಗಿದ್ದ ಮಹಿಳೆಗೆ, ಈತನ ವಂಚಕ ಬುದ್ದಿ ಅರಿವಿಗೆ ಬಂದಿದೆ. ಆಗ ತವರು ಮನೆಗೆ ಬಂದು, ಕೊಪ್ಪಳ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ನೀಡಿದ್ದಳು. ಪೊಲೀಸರು ಈ ಪ್ರಕರಣದ ಬೆನ್ನು ಹತ್ತಿದ್ದಾಗ, ಆರೋಪಿಯ ಅಸಲಿ ಮುಖ ಬಯಲಾಗಿದೆ.
ಕ್ಯಾಸಿನೋದಲ್ಲಿ ಮೋಜು ಮಸ್ತಿ:
ಯುವತಿ ಮತ್ತವರ ಕುಟುಂಬದವರಿಗೆ ವಂಚನೆ ಮಾಡಿ, ಬಂದ ಹಣವನ್ನು ಗೋವಾದ ಕ್ಯಾಸಿನೋಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದ. ಜೀವನಕ್ಕೆ ಯಾವುದೇ ಕೆಲಸ ಮಾಡದೇ ಇದ್ದರೂ ಪ್ರತಿನಿತ್ಯ ವಂಚಿಸುವುದನ್ನೇ ಕಾಯಕ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.