ಜೈಪುರ: ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಶನಿವಾರ ರಾಜಸ್ಥಾನದ ಜೈಪುರ ಜಿಲ್ಲೆ, ದುಡು ಪಟ್ಟಣದ ಬಾವಿಯೊಂದರಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಸಹೋದರಿಯರು ತಮ್ಮ ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಜನರಲ್ಲಿ ಪ್ರಶ್ನೆ ಮೂಡಿದೆ.
ಕಲು ದೇವಿ(27), ಮಮತಾ(23) ಹಾಗೂ ಕಮಲೇಶ್(20) ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲು ದೇವಿಯ ಇಬ್ಬರು ಮಕ್ಕಳಲ್ಲಿ ಓರ್ವನಿಗೆ 4 ವರ್ಷ ಹಾಗೂ ಇನ್ನೊಂದು ಕೇವಲ 27 ದಿನದ ಹಸುಗೂಸು. ಅಲ್ಲದೇ ಮಮತಾ ಹಾಗೂ ಕಮಲೇಶ್ ಇಬ್ಬರೂ ತುಂಬು ಗರ್ಭಿಣಿಯರಾಗಿದ್ದರು.
ಈ ಮೂವರು ಸಹೋದರಿಯರು ಹಾಗೂ ಮಕ್ಕಳು ಬುಧವಾರ ನಾಪತ್ತೆಯಾಗಿದ್ದರು. ಶನಿವಾರದವರೆಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಅವರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಘಟನೆಗೂ ಒಂದು ದಿನ ಮುನ್ನ ಮಮತಾ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಪ್ರತಿದಿನ ಸಾಯುವುದಕ್ಕಿಂತ ಒಮ್ಮೆ ಸಾಯುವುದೇ ಉತ್ತಮ ಎಂದು ಬರೆದಿದ್ದಳು. ಇದನ್ನೂ ಓದಿ: ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ ದೇಶ ವಿರೋಧಿ ಚಿಂತನೆ – ಬಿಜೆಪಿ ಸಂಸದ ಅಲ್ಫೋನ್ಸ್ ಹೇಳಿಕೆ
ಮೂವರು ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಸಹೋದರಿಯರು ಒಂದೇ ಕುಟುಂಬದ ಮೂವರನ್ನು 2003ರಲ್ಲಿಯೇ ಬಾಲ್ಯ ವಿವಾಹವಾಗಿದ್ದರು. ಅವರ ಪತಿಯರು ಪ್ರತಿ ದಿನ ಕುಡಿದು ಬಂದು, ಅಮಲಿನಲ್ಲಿ ಪತ್ನಿಯರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಇತ್ತೀಚೆಗೆ ಕಲು ದೇವಿಗೆ ತನ್ನ ಅತ್ತಿಗೆ ಥಳಿಸಿದ್ದು, 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಕೆಯ ಕಣ್ಣಿಗೆ ಗಾಯಗಳಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಿರಿಯ ಸಹೋದರಿ ಕಮಲೇಶ್‌ಗೂ ಇತ್ತೀಚೆಗೆ ತನ್ನ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡಿದ ಬಳಿಕ ಥಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯರ ಶವಗಳು ತಮ್ಮ ಮನೆಯಿಂದ 2 ಕಿಮೀ ದೂರದ ಬಾವಿಯಲ್ಲಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಪತಿಯರಾದ ನರ್ಸಿ, ಗೊರಿಯೊ ಹಾಗೂ ಮುಖೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವರದಕ್ಷಿಣೆ ವಿಚಾರದ ಬಗೆಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.