ನವದೆಹಲಿ: ಕೆಲವು ತಿಂಗಳುಗಳ ಹಿಂದಷ್ಟೇ ‘ಅತ್ಯುತ್ತಮ ಬೀಟ್ ಕಾನ್‍ಸ್ಟೇಬಲ್’ ಪ್ರಶಸ್ತಿ ಪಡೆದ ಪೇದೆಯನ್ನ ದರೋಡೆ ಪ್ರಕರಣದಲ್ಲಿ ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣದ ಪಾಣಿಪತ್‍ನಲ್ಲಿರುವ ಬ್ಯಾಂಕ್‍ವೊಂದರಲ್ಲಿ 5 ಕೋಟಿ ರೂ. ಮೌಲ್ಯದ ಆಭರಣಗಳನ್ನು ದರೋಡೆ ಮಾಡಿದ ಆರೋಪದ ಮೇಲೆ ಪೊಲೀಸ್ ಕಾನ್‍ಸ್ಟೇಬಲ್‍ನನ್ನು ಬಂಧಿಸಲಾಗಿದೆ.
Advertisement
ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾನ್‍ಸ್ಟೇಬಲ್ ತನ್ನ ಸಹಚರರೊಂದಿಗೆ ಬ್ಯಾಂಕ್‍ನ್ನು ಲೂಟಿ ಮಾಡಿರುವುದು ಕಂಡು ಬಂದಿದೆ. ಆರೋಪಿ ಪಾಣಿಪತ್ ಮೂಲದವನಾಗಿದ್ದಾನೆ ಎಂದು ತಿಳಿಸಿದ್ದಾರೆ.
Advertisement
Advertisement
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆರೋಪಿಯ ಪೋಷಕರ ಮನೆ ಮೇಲೆ ದಾಳಿ ಮಾಡಿದ್ದಾರೆ. ಆರೋಪಿಯ ತಂದೆ ಹಾಗೂ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ 12 ಲಕ್ಷ ರೂ. ಪತ್ತೆಯಾಗಿದೆ ಎಂದು ಪೊಲೀಸು ವಿವರಿಸಿದ್ದಾರೆ.
Advertisement
ಈ ಕಾನ್‍ಸ್ಟೇಬಲ್ ಕಳೆದ ಕೆಲವು ತಿಂಗಳುಗಳಿಂದ ಮೋಟಾರ್ ಆ್ಯಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯೂನಲ್ ಸೆಲ್(ಎಂಎಸಿಟಿ)ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಆಗಸ್ಟ್ ತಿಂಗಳಿಂದ ಯಾವುದೇ ನೋಟಿಸ್ ನೀಡದೆ ಕೆಲಸಕ್ಕೆ ಗೈರಾಗಿದ್ದನು. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಈತನಿಗೆ ‘ಅತ್ಯುತ್ತಮ ಬೀಟ್ ಕಾನ್‍ಸ್ಟೇಬಲ್’ ಪ್ರಶಸ್ತಿ ನೀಡಲಾಗಿತ್ತು ಎಂದು ತಿಳಿಸಿದರು.
ದರೋಡೆ ಮಾಡುವುದರ ಜೊತೆಗೆ, ಕಾನ್‍ಸ್ಟೇಬಲ್ ಜನವರಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವು ಇತ್ತು. ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಪೇದೆಯನ್ನು ಪೊಲೀಸ್ ಲೈನ್ಸ್‍ಗೆ ವರ್ಗಾಯಿಸಲಾಗಿತ್ತು. ನಂತರ ಎಂಎಸಿಟಿ ಸೆಲ್‍ಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.