ಬೆಂಗಳೂರು: ಗೃಹಜ್ಯೋತಿ ಯೋಜನೆಯ (GruhaJyothi Scheme) ಫಲಾನುಭವಿಗಳಿಗೆ ಸರ್ಕಾರ ಕೊನೆಯ ಎಚ್ಚರಿಕೆ ಮತ್ತು ಅವಕಾಶ ನೀಡಿದೆ. ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಮನೆ ಬಾಗಿಲಿಗೆ ಬಂದರೂ ಮಾಹಿತಿ ನೀಡದ ಫಲಾನುಭವಿಗಳಿಗೆ ಈಗ ಅಂತಿಮ ಅವಕಾಶ ಅಕ್ಟೋಬರ್ 30ರೊಳಗೆ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದಿದ್ದರೇ ಗೃಹಜ್ಯೋತಿ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಹಾಗಾದ್ರೆ, 16 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಕಳೆದುಕೊಳ್ಳುತ್ತಾರಾ? ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಉಚಿತ ವಿದ್ಯುತ್ ಸೌಲಭ್ಯ ನೀಡುವ ಗೃಹಜ್ಯೋತಿ ಯೋಜನೆಗೆ ಈಗ ದಾಖಲೆ ಪರಿಶೀಲನೆಯೇ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ ಬೆಸ್ಕಾಂನಲ್ಲೇ (BESCOM) ಸುಮಾರು 69 ಲಕ್ಷ ಫಲಾನುಭವಿಗಳಿದ್ದು, ಈ ಪೈಕಿ 16 ಲಕ್ಷ ಮಂದಿಯ ಮಾಹಿತಿ ಇನ್ನೂ ಬೆಸ್ಕಾಂಗೆ ಲಭ್ಯವಾಗಿಲ್ಲ. ಫಲಾನುಭವಿಗಳ ದಾಖಲೆ ಪರಿಶೀಲನೆಗಾಗಿ ಬೆಸ್ಕಾಂ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿದ್ದಾರೆ. ಮೀಟರ್ ರೀಡರ್ಗಳು ಮೂರು ಬಾರಿ ಮನೆಗೆ ತೆರಳಿದರೂ ಹಲವರು ಸಿಕ್ಕಿಲ್ಲ.

ಈಗ ಫಲಾನುಭವಿಗಳಿಗೆ ಬೆಸ್ಕಾಂ ಕೊನೆಯ ಅವಕಾಶ ನೀಡಿದೆ. ಮನೆಗೆ ಸಿಬ್ಬಂದಿ ಬಂದಾಗ ಲಭ್ಯವಾಗದವರು ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪವಿಭಾಗ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನ ಸಲ್ಲಿಸಬೇಕು. ಅಗತ್ಯ ಅರ್ಜಿಯನ್ನ ಭರ್ತಿ ಮಾಡಿ ಮಾಹಿತಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ಹೀಗೆ ಅಕ್ಟೋಬರ್ 30ರೊಳಗೆ ದಾಖಲೆಗಳನ್ನ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗ ಮಾತ್ರ ನಿಮ್ಮ ಗೃಹಜ್ಯೋತಿ ಗ್ಯಾರಂಟಿ ನಿಮಗೆ ಗ್ಯಾರಂಟಿ ಆಗಲಿದೆ. ಇದೇ ಕೊನೆಯ ಅವಕಾಶ ಅಂತಿರೋ ಸರ್ಕಾರ, ಮತ್ತೊಮ್ಮ ಈ ಕಾಲ ಮಿತಿಯನ್ನ ನೀಡೋದಿಲ್ಲ ಎಂದಿದೆ.
ಆದಾಯ ತೆರಿಗೆ ಪಾವತಿಸುವವರು ಹಾಗೂ ಹೊರರಾಜ್ಯದ ಮತದಾರರು ಸೇರಿದಂತೆ ಕೆಲ ಫಲಾನುಭವಿಗಳು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಪರಿಶೀಲನೆ ಬಾಕಿ ಉಳಿಯಲು ಕಾರಣ ಎನ್ನಲಾಗಿದೆ. ಅದರಲ್ಲೂ ಅಪಾರ್ಟ್ಮೆಂಟ್ ನವ್ರು ಮರುಪರೀಶೀಲನೆಗೆ ಸಹಕಾರ ನೀಡಿಲ್ಲ, ಈಗಾಗಲೇ ಶೇ.98ರಷ್ಟು ಮರುಪರಿಶೀಲನೆ ಮುಗಿದಿದ್ದು, ಅಕ್ಟೋಬರ್ ಅಂತ್ಯದ ಬಳಿಕ ಸರ್ಕಾರಕ್ಕೆ ಅಂತಿಮ ವರದಿಯನ್ನ ನೀಡುತ್ತೇವೆ. ಸರ್ಕಾರ ಮುಂದಿನ ಆದೇಶವನ್ನ ಕೈಗೊಳ್ಳಲಿದೆ ಎಂದು ಬೆಸ್ಕಾಂ ಎಂ.ಡಿ ಶಿವಶಂಕರ್ ಹೇಳಿದ್ದಾರೆ.
ಒಟ್ನಲ್ಲಿ ಮರುಪರಿಶೀಲನೆಯಲ್ಲಿ ಭಾಗವಹಿಸದವರು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಹಚ್ಚಾಗಿದೆ. ಹೀಗಾಗಿ, ಗೃಹಜ್ಯೋತಿ ಯೋಜನೆಯ ಸೌಲಭ್ಯ ಮುಂದುವರಿಸಿಕೊಳ್ಳಲು ಬಾಕಿ ಉಳಿದಿರುವ ಫಲಾನುಭವಿಗಳು ತಕ್ಷಣವೇ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕಿದೆ. 69 ಲಕ್ಷ ಫಲಾನುಭವಿಗಳ ಪೈಕಿ 16 ಲಕ್ಷ ಮಂದಿಯ ಮಾಹಿತಿ ಇನ್ನೂ ಬಾಕಿ ಇದೆ.
