ಬೆಂಗಳೂರು: ಪ್ರಿಯಾ ಗ್ರಾಹಕರೇ, ನೀವು ನಿಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸದ ಕಾರಣ ನಿಮ್ಮ ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿಯಿಂದಲೇ ಕಡಿತಗೊಳಿಸಲಾಗುವುದು, ತಕ್ಷಣ ನಿಮ್ಮ ವಿದ್ಯುತ್ ಅಧಿಕಾರಿಯ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ವಿದ್ಯುತ್ ಪಾವತಿಸಿ ಎಂಬಂತಹ ಮೆಸೇಜ್‍ಗಳನ್ನು ಕಳುಹಿಸಿ ಬೆಸ್ಕಾಂ ಗ್ರಾಹಕರನ್ನು ವಂಚಿಸುವ ಆನ್‍ಲೈನ್ ವಂಚಕರ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಆನ್‍ಲೈನ್ ವಂಚನೆ ಬಗ್ಗೆ ಬೆಸ್ಕಾಂ ತನ್ನ ಗ್ರಾಹಕರಿಗೆ ಅರಿವು ಮೂಡಿಸುತ್ತಿದ್ದರೂ, ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ ಎಂಬ ಗಾಬರಿಗೆ ಒಳಗಾಗಿ ಆನ್‍ಲೈನ್ ವಂಚಕರ ಬಲೆಗೆ ಸುಲಭ ತುತ್ತಾಗುತ್ತಿದ್ದಾರೆ. ಆನ್‍ಲೈನ್ ವಂಚಕರ ಬಗ್ಗೆ ಬೆಸ್ಕಾಂ ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದು, ಗ್ರಾಹಕರಿಗೆ ನಿರಂತರ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
Advertisement
Advertisement
ಬೆಸ್ಕಾಂ ತನ್ನ ಫೇಸ್‍ಬುಕ್ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ, ಆನ್‍ಲೈನ್ ವಂಚನೆ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದು, ಗ್ರಾಹಕರು ವಿದ್ಯುತ್ ಬಿಲ್‍ಗಳನ್ನು ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಬೆಸ್ಕಾಂ ಮಿತ್ರ ಆ್ಯಪ್, ಹತ್ತಿರದ ಬೆಸ್ಕಾಂ ಕಚೇರಿ, ಬೆಸ್ಕಾಂ ವೆಬ್‍ಸೈಟ್ ಮತ್ತು ಗೂಗಲ್ ಆ್ಯಪ್‍ಗಳಲ್ಲಿ ಮಾತ್ರ ಪಾವತಿಸಬಹುದಾಗಿದೆ.
Advertisement
Advertisement
ಗ್ರಾಹಕರಿಗೆ ವಿದ್ಯುತ್ ಬಿಲ್‍ಗಳನ್ನು ಪಾವತಿಸಲು ಕರೆ ಬಂದಲ್ಲಿ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಲು ಬೆಸ್ಕಾಂ ವಿನಂತಿಸಿದೆ. ಆನ್‍ಲೈನ್ ವಂಚಕರು ಗ್ರಾಹಕರಿಗೆ ಕರೆ ಮಾಡಿ ತಾವು ಸೂಚಿಸುವ ಮೊಬೈಲ್‍ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ವಿದ್ಯುತ್ ಶುಲ್ಕವನ್ನು ಪಾವತಿಸಲು ಸೂಚಿಸುತ್ತಿದ್ದಾರೆ. ಇಂತಹ ಯಾವುದೇ ಬಿಲ್ ಪಾವತಿಸುವ ವ್ಯವಸ್ಥೆ ಬೆಸ್ಕಾಂನಲ್ಲಿಲ್ಲ. ಗ್ರಾಹಕರು ಇಂತಹ ಕರೆಗಳು ಬಂದ ತಕ್ಷಣ ಬೆಸ್ಕಾಂ ಸಹಾಯವಾಣಿಗೆ ಮಾಹಿತಿ ನೀಡಲು ಕೋರಲಾಗಿದೆ.
ಆನ್‍ಲೈನ್ ವಂಚನೆ ಬಗ್ಗೆ ಜನರಿಗೆ ನಾವು ಮಾಹಿತಿ ನೀಡುತ್ತಿದ್ದೇವೆ. ಬಿಲ್ ಪಾವತಿಸುವಂತೆ ಬೆಸ್ಕಾಂನಿಂದ ಗ್ರಾಹಕರಿಗೆ ಯಾವುದೇ ಕರೆ ಹೋಗುವುದಿಲ್ಲ. ಅಲ್ಲದೆ ಬೆಸ್ಕಾಂ ಬಿಲ್ ಕಲೆಕ್ಟರ್‍ಗೆ ಗ್ರಾಹಕರು ನಗದು ಪಾವತಿಸುವಂತಿಲ್ಲ. ಬೆಸ್ಕಾಂನ ಹತ್ತಿರದ ಪಾವತಿ ಕೇಂದ್ರ, ಬೆಸ್ಕಾಂ ಮಿತ್ರ, ಮತ್ತು ಗೂಗಲ್ ಪೇ ಗಳಲ್ಲಿ ಬಿಲ್ ಪಾವತಿಸಲು ಅನುಮತಿ ನೀಡಲಾಗಿದೆ ಎಂದು ಬೆಸ್ಕಾಂನ ಗ್ರಾಹಕ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಎಸ್.ಆರ್.ನಾಗರಾಜ ತಿಳಿಸಿದ್ದಾರೆ.
ಇಂತಹ ವಂಚನೆಗಳ ಬಗ್ಗೆ ಗ್ರಾಹಕರು ಎಚ್ಚರದಿಂದಿರಬೇಕು. ಬಿಲ್ ಪಾವತಿಗೆ ಬೆಸ್ಕಾಂ ಬಿಲ್ ನೀಡಿದ ದಿನದಿಂದ ಒಂದು ತಿಂಗಳ ಕಾಲಾವಕಾಶವಿರುತ್ತದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂಬ ಯಾವುದೇ ಮೆಸೇಜ್ ಅನ್ನು ಬೆಸ್ಕಾಂ ಕಳುಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿ ನಡೆಯುವ ಗ್ರಾಹಕರ ಸಂವಾದ ಸಭೆಗಳಲ್ಲಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡುತ್ತಾರೆ ಎಂದು ನಾಗರಾಜ್ ತಿಳಿಸಿದ್ದಾರೆ.