ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡ ಕೊರೊನಾ ಸೋಂಕಿತ ಹಾಗೂ ಭಾನುವಾರ ಮೃತಪಟ್ಟ ಮಹಿಳೆ ಒಂದೇ ವಾರ್ಡಿನಲ್ಲಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಆತ್ಮಹತ್ಯೆ ಮಾಡಿಕೊಂಡ 50 ವರ್ಷದ ಸೋಂಕಿತ ಅವಿವಾಹಿತನಾಗಿದ್ದು, ಆಟೋ ಡ್ರೈವರ್ ಆಗಿ ಜೀವನ ನಿರ್ವಹಣೆ ಮಾಡುತ್ತಿದ್ದನು. ಈತ ನಾಲ್ಕು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದನು. ಅಲ್ಲದೆ ಕೊರೊನಾ ಸೋಂಕು ಕೂಡ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗಾಬರಿಗೊಂಡಿರಬಹುದು ಎಂದು ಶಂಕಿಸಲಾಗಿದೆ.
ಇಂದು ಬೆಳಗ್ಗೆ ತನಗೆ ತಿಂಡಿ ಬೇಕು ಎಂದು ರೋಗಿ ಕೇಳಿದ್ದಾನೆ. ಹೀಗಾಗಿ ಸಿಬ್ಬಂದಿ ತಿಂಡಿ ತರಲು ಹೋಗಿದ್ದಾರೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಸೋಂಕಿತ ಆಸ್ಪತ್ರೆಯ ತುರ್ತು ನಿರ್ಗಮನದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ರೋಗಿ ಆಸ್ಪತ್ರೆಯಿಂದ ಪರಾರಿಯಾಗಲು ಯತ್ನಿಸಿ ಮೃತಪಟ್ಟಿರಬಹುದೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.
10 ದಿನದ ಹಿಂದೆ ಈತನಿಗೆ ಶೀತ, ಕೆಮ್ಮು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ತಿಲಕ್ ನಗರದ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದನು. ಸ್ಥಳೀಯ ಆಸ್ಪತ್ರೆಯಿಂದ ವಿಕ್ಟೋರಿಯಾ ಗೆ ರೆಫರ್ ಮಾಡಲಾಗಿದ್ದು, ವಿಕ್ಟೋರಿಯಾದಲ್ಲಿ ಮೂರು ದಿನಗಳಿಂದ ಐಸೂಲೇಷನ್ ವಾರ್ಡ್ ನಲ್ಲಿ ಇದ್ದನು. ತಿಲಕ್ ನಗರದಲ್ಲಿರುವ ಅಣ್ಣನ ಮನೆಯಲ್ಲಿ ವಾಸವಾಗಿದ್ದ ಈತನಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನ ಹೋಟೆಲ್ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು, ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.