ಬೆಂಗಳೂರು: ನಾನು ಯುವ ದಸರಾ ಕಾರ್ಯಕ್ರಮದಲ್ಲಿ ಇದ್ದಿದ್ದರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರಿಗೂ ಮದುವೆ ಮಾಡಿಸುತ್ತಿದ್ದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಗೆ ನನ್ನ ಬೆಂಬಲವಿದೆ. ಪ್ರೇಮಿಗಳಿಗೆ ನನ್ನ ಬೆಂಬಲ ಯಾವಾಗಲೂ ಇದ್ದೆ ಇರುತ್ತದೆ. ನಾನು ಅಲ್ಲಿ ಇದ್ದಿದ್ದರೆ ಅವರಿಬ್ಬರಿಗೂ ಮದುವೆ ಮಾಡಿಸುತ್ತಿದ್ದೆ ಎಂದು ತಿಳಿಸಿದ್ದಾರೆ.
Advertisement
Advertisement
ಚಂದನ್ ಮತ್ತು ನಿವೇದಿತಾ ಅವರ ಮೇಲೆ ಪೊಲೀಸ್ ದೂರು ದಾಖಲಿಸಿರುವುದು ತಪ್ಪು. ಅವರು ಠಾಣೆಗೆ ಕರೆದುಕೊಂಡು ಹೋಗಿ ಮದುವೆ ಮಾಡಿಸಬೇಕಿತ್ತು. ಅದನ್ನು ಬಿಟ್ಟು ಕೇಸ್ ಹಾಕಿದ್ದಾರೆ. ನಾನು ದಸರಾ ಮುಗಿದ ಮೇಲೆ ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇನೆ. ನಾವು ಅವರಿಗೆ ಬೆಂಬಲ ನೀಡಬೇಕು ಅದನ್ನು ಬಿಟ್ಟು ಮಂತ್ರಿ ರೀತಿ ಶಾಪ ಹಾಕಬಾರದು. 6 ತಿಂಗಳ ನಂತರ ಏನೋ ಆಗುತ್ತೆ ಎಂದು ಶಾಪ ಹಾಕಿದರೆ ಅವರ ಗತಿ ಏನ್ ಆಗಬೇಕು ಎಂದು ಪ್ರಶ್ನೆ ಮಾಡಿದರು. ಇದನ್ನು ಓದಿ: ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ
Advertisement
ನಡೆದಿದ್ದೇನು?
ಕಳೆದ ಶನಿವಾರ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾಳಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು ಅಲ್ಲದೇ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದ್ದರು.
Advertisement
ಈ ಬೆನ್ನಲ್ಲೇ ಪ್ರಪೋಸ್ ಮಾಡಿರುವ ವಿಚಾರ ಭಾರೀ ವಿವಾದಕ್ಕೀಡಾಗಿತ್ತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಅಂದಿದ್ದಾರೆ. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದರು. ಇದನ್ನು ಓದಿ: ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ
ಈ ಮಧ್ಯೆ ಉಸ್ತುವಾರಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿ, ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ನಾಡಿನ ಅಧಿದೇವತೆಯ ನಾಡಹಬ್ಬದ ವೇದಿಕೆಯಲ್ಲಿ ಈ ರೀತಿ ಆಗಬಾರದಿತ್ತು. ತಪ್ಪೆಸಗಿರುವ ಅವರಿಬ್ಬರಿಗೂ ಬರುವ ಆರು ತಿಂಗಳಲ್ಲಿ ದೇವಿಯೇ ಶಿಕ್ಷೆ ನೀಡುತ್ತಾರೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದಕ್ಕೆ ದಸರಾ ಉಪಸಮಿತಿ ಕಾರಣವಲ್ಲ. ಈ ಸಂಬಂಧ ಮೈಸೂರು ಜಿಲ್ಲಾ ಅಧೀಕ್ಷಕ ಹಾಗೂ ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ರಿಷ್ಯಂತ್ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾರಿಗೆ ಕಾರಣ ಕೇಳಿ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ ಎಂದು ಕಿಡಿಕಾರಿದ್ದರು.