Monday, 24th February 2020

Recent News

ನನ್ನ ದಾಖಲೆಯನ್ನು ಅಶ್ವಿನ್ ಮುರಿಯುತ್ತಾರೆ: ಹರ್ಭಜನ್ ಸಿಂಗ್

ನವದೆಹಲಿ: ನನ್ನ ದಾಖಲೆಯನ್ನು ಆರ್ ಅಶ್ವಿನ್ ಮುರಿಯುತ್ತಾರೆ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

ಟೆಸ್ಟ್ ಕ್ರಿಕೆಟ್‍ನಲ್ಲಿ ಒಟ್ಟು 417 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಮೊದಲ ಸ್ಥಾನದಲ್ಲಿ 619 ಟೆಸ್ಟ್ ವಿಕೆಟ್ ಪಡೆದ ಅನಿಲ್ ಕುಂಬ್ಳೆ, ಎರಡನೇ ಸ್ಥಾನದಲ್ಲಿ ಮಾಜಿ ನಾಯಕ ಕಪಿಲ್ ದೇವ್ ಇದ್ದಾರೆ.

ಈಗ ಈ ವಿಚಾರದ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಟೆಸ್ಟ್ ಕ್ರಿಕೆಟಿನಲ್ಲಿ 417 ವಿಕೆಟ್ ಪಡೆದಿರುವ ನನ್ನ ದಾಖಲೆಯನ್ನು ಆರ್ ಆಶ್ವಿನ್ ಅವರು ಬಹುಬೇಗ ಮುರಿಯಲಿದ್ದಾರೆ. ಅವರಿಗೆ ಆ ಶಕ್ತಿ ಇದೆ. ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ 400 ವಿಕೆಟ್‍ಗಳ ಗಡಿಯನ್ನು ದಾಟಲಿದ್ದಾರೆ ಮತ್ತು ನನ್ನ ದಾಖಲೆಯನ್ನು ಮುರಿಯುತ್ತಾರೆ ಎಂದು ಅವರು ಹೇಳಿದರು.

ಅಶ್ವಿನ್ ಟೆಸ್ಟ್ ಕ್ರಿಕೆಟ್‍ನಲ್ಲಿ 600 ವಿಕೆಟ್‍ಗಳ ಗಡಿ ದಾಟಲಿದ್ದಾರೆ ಎಂಬುದು ನನಗೆ ಖಾತ್ರಿಯಿಲ್ಲ. ಆದರೆ ಅವರು ಖಂಡಿತವಾಗಿಯೂ 400 ಮತ್ತು 500ರ ಗಡಿ ದಾಟುತ್ತಾರೆ. ಅವರು 600 ವಿಕೆಟ್‍ಗಳನ್ನು ಪಡೆಯಬಹುದು. ಆದರೆ ಅವರು ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು. ಹಾಗೆ ಮಾಡಿದರೆ ಅವರು ಖಂಡಿತವಾಗಿಯೂ 600 ರ ಗಡಿ ದಾಟುತ್ತಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಟ್ಟು 700 ವಿಕೆಟ್ ಪಡೆದಿರುವ ಹರ್ಭಜನ್ ಹೇಳಿದ್ದಾರೆ.

ಅಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಅಶ್ವಿನ್ ವಿಶಾಖಪಟ್ಟಣದಲ್ಲಿ ನಡೆದ ತಮ್ಮ 66 ನೇ ಟೆಸ್ಟ್ ಪಂದ್ಯದಲ್ಲಿ 350 ವಿಕೆಟ್ ಪಡೆದರು. ಈ ಮೂಲಕ ಅತ್ಯಂತ ವೇಗದಲ್ಲಿ 350 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ 77 ಟೆಸ್ಟ್ ಪಂದ್ಯಗಳಲ್ಲಿ 350 ವಿಕೆಟ್ ಪಡೆದ ಕನ್ನಡಿಗ ಅನಿಲ್ ಕುಂಬ್ಳೆ ಮೊದಲ ಸ್ಥಾನ ಪಡೆದಿದ್ದರು.

ಅಶ್ವಿನ್ ಅವರ 350 ಟೆಸ್ಟ್ ವಿಕೆಟ್‍ಗಳಲ್ಲಿ 242 ವಿಕೆಟ್‍ಗಳು ತವರಿನಲ್ಲಿ ಆಡಿದ 39 ಪಂದ್ಯಗಳಲ್ಲಿ ಬಂದಿದ್ದರೆ ಉಳಿದ 108 ವಿಕೆಟ್‍ಗಳು ವಿದೇಶದಲ್ಲಿ ಆಡಿದ 27 ಟೆಸ್ಟ್ ಪಂದ್ಯಗಳಿಂದ ಬಂದಿವೆ. ಆದರೆ ಏಷ್ಯಾದಲ್ಲಿ ಅವರು ಆಡಿದ 46 ಟೆಸ್ಟ್ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆ ಸಂಖ್ಯೆ 285 ವಿಕೆಟ್‍ಗಳಿಗೆ ಏರುತ್ತದೆ. ಇದನ್ನು ಬಿಟ್ಟರೆ ಉಪಖಂಡದ ಹೊರಗಿನ 20 ಪಂದ್ಯಗಳಿಂದ ಕೇವಲ 65 ಟೆಸ್ಟ್ ವಿಕೆಟ್‍ಗಳನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *