ಬೆಂಗಳೂರು: ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ ಎಂದರೆ ಭಾರೀ ದಂಡ ಕಟ್ಟಲು ಸವಾರರು ಸಿದ್ಧವಾಗಿರಬೇಕು ಎನ್ನುವ ಮೂಲಕ ಹೊಸ ಟ್ರಾಫಿಕ್ ರೂಲ್ಸ್ ಇಂದಿನಿಂದ ಜಾರಿಗೆ ಬರುತ್ತಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯ ದಂಡ ಹೆಚ್ಚಳವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಹಿತಿ ನೀಡಿದ ಅವರು, ಮೋಟಾರು ವಾಹನ ಕಾಯಿದೆ ಹೊಸ ನಿಯಮ ಸದ್ಯ ಜಾರಿ ಇಲ್ಲ. ಕೇಂದ್ರ ಸರ್ಕಾರದ ಹೊಸ ನಿಯಮದ ಕುರಿತು ಅಧಿಕೃತ ಆದೇಶ ಇನ್ನೂ ನಮ್ಮ ಕೈ ಸೇರಿಲ್ಲ. ಆದೇಶ ಹೊರಬಿದ್ದರೂ ಸಹ ಮೊದಲು ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಮೂಲಕ ನಮ್ಮ ಬಳಿ ಬರುತ್ತದೆ. ಆದರೆ ಅದು ಇನ್ನೂ ನಮ್ಮ ಕೈ ತಲುಪಿಲ್ಲ. ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಬಂದ ಬಳಿಕ ಪರಿಷ್ಕೃತ ದರದಂತೆ ದಂಡ ಸಂಗ್ರಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಸದ್ಯಕ್ಕೆ ಪರಿಷ್ಕೃತ ದರ ಜಾರಿಯಿಲ್ಲ ಎಂದು ನಿರಾಳರಾಗಬಹುದಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶದ ಪ್ರತಿ ರವಾನಿಸಲು ಇನ್ನೂ ಎರಡರಿಂದ ಮೂರು ದಿನ ಸಮಯ ಹಿಡಿಯಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ವಾಹನ ಸವಾರರು ಹಬ್ಬದ ಸಮಯದಲ್ಲಿ ಹೆಚ್ಚು ದಂಡ ತೆರುವುದರಿಂದ ತಪ್ಪಿಸಿಕೊಂಡಂತಾಗಿದೆ.