ಬೆಂಗಳೂರು: ಮೂರು ಅಂತಸ್ತಿನ ಕಟ್ಟಡವೊಂದು ಕುಸಿದ ಘಟನೆ ಜೆ.ಪಿ. ನಗರದ 7ನೇ ಹಂತದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿ ಬಳಿ ಘಟನೆ ನಡೆದಿದ್ದು, ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಟ್ಟಡದ ಮೊದಲ ಎರಡು ಅಂತಸ್ತಿನಲ್ಲಿ ಮನೆಗಳಿದ್ದರೆ, ಕೆಳ ಮಹಡಿಯಲ್ಲಿ ಅಂಗಡಿಗಳಿದ್ದವು. ಕಟ್ಟಡ ಬೀಳುತ್ತಿದ್ದಂತೆಯೇ ಜನರು ಅಂಗಡಿಯಿಂದ ಓಡಿ ಹೊರ ಬಂದಿದ್ದರಿಂದ ಭಾರೀ ಅನಾಹುತ ತಪ್ಪಿದೆ.
Advertisement
ಧರಗೆ ಉರುಳಿ ಭಾರೀ ಅನಾಹುತ ಸೃಷ್ಟಿಸಿದ ಕಟ್ಟಡವನ್ನು 30 ವರ್ಷದ ಹಿಂದೆಯೇ ನಿರ್ಮಿಸಲಾಗಿತ್ತು. ಮಣ್ಣಿನಿಂದ ಮೊದಲೆರಡು ಮಹಡಿ ನಿರ್ಮಾಣವಾಗಿದ್ದರೆ, ಮೂರನೇ ಮಹಡಿಯನ್ನು ಸಿಮೆಂಟ್‍ನಿಂದ ನಿರ್ಮಿಸಲಾಗಿತ್ತು. ಆದರೆ ಮಳೆ ನೀರಿಗೆ ಮಣ್ಣಿನಿಂದ ನಿರ್ಮಿಸಿದ್ದ ಮಹಡಿ ಸಂಪೂರ್ಣವಾಗಿ ಶಿಥಿಲವಾಗಿದ್ದವು.
Advertisement
Advertisement
ಕಟ್ಟಡವು ಏಳೆಂಟು ವರ್ಷದಿಂದಲೇ ಬೀಳುವ ಹಂತದಲ್ಲಿದ್ದರೂ ಒಂದು ವರ್ಷದ ಹಿಂದೆ ಮೂರನೇ ಮಹಡಿಯನ್ನು ನಿರ್ಮಿಸಲಾಗಿತ್ತು. ಹೀಗಾಗಿ ಸ್ವಯಂ ಪ್ರೇರಿತವಾಗಿಯೇ ಆರೇಳು ಕುಟುಂಬಗಳು ಮನೆ ಖಾಲಿ ಮಾಡಿದ್ದವು. ಇನ್ನೂ 7 ಕುಟುಂಬಗಳು ಕಟ್ಟಡದಲ್ಲಿ ವಾಸವಿದ್ದರು. ಜೊತೆಗೆ ಕೆಳ ಮಹಡಿಯಲ್ಲಿ ತರಕಾರಿ, ಚಿಲ್ಲರೆ ಅಂಗಡಿ, ಮಾಂಸದ ಅಂಗಡಿ ಇದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
ಕಟ್ಟಡ ಕುಸಿದ ಮಾಹಿತಿ ಸಿಗುತ್ತಿದ್ದಂತೆ 2 ಅಗ್ನಿಶಾಮಕ ವಾಹನ, 30ಕ್ಕೂ ಹೆಚ್ಚು ಸಿಬ್ಬಂದಿ, ಐದು ಜನ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಇತ್ತ ಬಿಬಿಎಂಪಿ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡ ತೆರೆವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಫೆಟ್ ಅವರು, ಸಂಜೆ 7 ಗಂಟೆ ಸುಮಾರಿಗೆ ಕಟ್ಟಡ ಕುಸಿತವಾಗಿದೆ ಅಂತ ಮಾಹಿತಿ ಬಂತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಟ್ಟು 6ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದರೆ, ಕೆಳಮಹಡಿಯಲ್ಲಿ ಅಂಗಡಿಗಳಿದ್ದವು. ಮನೆ ಹಾಗೂ ಅಂಗಡಿ ಸಾಮಗ್ರಿಗಳು ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿವೆ ಎಂದು ತಿಳಿಸಿದರು.
ಮಾಲೀಕರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಸ್ಥಳಕ್ಕಾಗಮಿಸಿದ್ದಾರೆ. ಅವರು ದೂರು ನೀಡಿದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.