Connect with us

Bengaluru City

ಆಂಧ್ರದ ಟೆಕ್ಕಿಗೆ ಕೊರೊನಾ : ಬೆಂಗ್ಳೂರಲ್ಲಿ ಲ್ಯಾಂಡ್ ಆಗಿದ್ರೂ ಪತ್ತೆ ಆಗಲಿಲ್ಲ ಯಾಕೆ?

Published

on

ಬೆಂಗಳೂರು: ಆಂಧ್ರಪ್ರದೇಶ ಮೂಲದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಟೆಕ್ಕಿ ಕೊರೊನಾ ವೈರಸ್‍ಗೆ ತುತ್ತಾಗಿರುವುದು ಅಧಿಕೃತವಾಗಿ ಪ್ರಕಟವಾಗಿದೆ.

ಟೆಕ್ಕಿ ವಿದೇಶದಿಂದ ಬಂದರೂ ಬೆಂಗಳೂರಿನಲ್ಲಿ ಯಾಕೆ ಪರೀಕ್ಷೆಗೆ ಒಳಪಡಲಿಲ್ಲ? 10 ದಿನಗಳ ನಂತರ ಬೆಳಕಿಗೆ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕೊರೊನಾ ವೈರಸ್ ತೀವ್ರಗೊಂಡ ನಂತರ ಭಾರತ ಸರ್ಕಾರ ಚೀನಾ, ಹಾಂಕಾಂಗ್, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪೂರ್, ಜಪಾನ್, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಜಪಾನ್, ವಿಯೆಟ್ನಾಂ, ನೇಪಾಳದಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸುವಂತೆ ಸೂಚಿಸಿತ್ತು. ಈ ದೇಶಗಳ ವಿಮಾನ ಬರುವ ಪ್ರಯಾಣಿಕರನ್ನು ಪರೀಕ್ಷೆ ನಡೆಸಿಯೇ ದೇಶದ ಒಳಗಡೆ ಬಿಡಲಾಗುತ್ತದೆ. ಇದನ್ನೂ ಓದಿ: ಚೀನಾದಲ್ಲಿ ವಾಯುಮಾಲಿನ್ಯ ಪ್ರಮಾಣ ಭಾರೀ ಇಳಿಕೆ -2019 ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?

ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ದುಬೈನಿಂದ ಆಗಮಿಸುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿರಲಿಲ್ಲ. ಹೀಗಾಗಿ ಬೆಂಗಳೂರಿನ ಟೆಕ್ಕಿ ಪರೀಕ್ಷೆಗೆ ಒಳಪಟ್ಟಿರಲಿಲ್ಲ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯಿಸಿ, 12 ದೇಶಗಳ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. 21 ವಿಮಾನ ನಿಲ್ದಾಣ ಮತ್ತು 35 ಬಂದರುಗಳಲ್ಲಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಆರೋಗ್ಯ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ವಿವರ ನೀಡಲಿದ್ದಾರೆ. ಈಗಾಗಲೇ ಆರೋಗ್ಯ ಅಧಿಕಾರಿಗಳು ಟೆಕ್ಕಿ ಕೆಲಸ ಮಾಡಿದ್ದ ಕಂಪನಿ ಮತ್ತು ಪಿಜಿಗೆ ತೆರಳಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.

ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?
ಟೆಕ್ಕಿ ಫೆ. 17 ರಂದು ದುಬೈಗೆ ಕೆಲಸದ ಸಂಬಂಧ ತೆರಳಿದ್ದರು. ಅಲ್ಲಿ ಹಾಕಾಂಗ್ ಗೆಳೆಯರ ಜೊತೆ ಎರಡು ಮೂರು ದಿನ ಕೆಲಸ ಮಾಡಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ದುಬೈನಿಂದ ಫೆ.20ರಂದು ಬೆಂಗಳೂರಿಗೆ ಬಂದವರಿಗೆ ಜ್ವರ ಕಾಣಿಸಿಕೊಂಡಿತ್ತು. ಪಿ.ಜಿಯಲ್ಲಿ ವಾಸ್ತವ್ಯ ಮಾಡಿದ್ದ ಟೆಕ್ಕಿ ನಗರದ ವಿವಿಧೆಡೆ ಓಡಾಡಿದ್ದರು. ಫೆ.22 ರಂದು ಬಸ್ ಮೂಲಕ ಹೈದರಾಬಾದ್‍ಗೆ ತೆರಳಿ ಸಿಕಂದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸೋಂಕು ಇರುವುದು ಖಚಿತವಾಗಿತ್ತು. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೊನಾ?

ಟೆಕ್ಕಿ ಈಗ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಈಟಾಲ ರಾಜೇಂದ್ರ ತಿಳಿಸಿದ್ದಾರೆ.

ಟೆಕ್ಕಿಯ ಸಂಪರ್ಕಕ್ಕೆ ಬಂದಿದ್ದ ಜನರನ್ನು ಗುರುತಿಸುವ ಮತ್ತು ಅವರನ್ನು ಪ್ರತ್ಯೇಕ ವಾರ್ಡ್‍ಗಳಿಗೆ ಶಿಫ್ಟ್ ಮಾಡುವ ಕೆಲಸದಲ್ಲಿ ತೆಲಂಗಾಣ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಟೆಕ್ಕಿ ಸಿಕಂದರಾಬಾದ್‍ನ ಅವಿಭಕ್ತ ಕುಟುಂಬಕ್ಕೆ ಸೇರಿದ್ದು, ಕುಟುಂಬಸ್ಥರು, ಬಸ್‍ನಲ್ಲಿ ಬೆಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣಿಸಿದ್ದ 27 ಪ್ರಯಾಣಿಕರು, ಸಿಕಂದರಾಬಾದ್‍ನ ಅಪೊಲೋ ಆಸ್ಪತ್ರೆಯ 20 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟು 80 ಮಂದಿಯ ಮೇಲೆ ನಿಗಾ ಇಡಲಾಗಿದ್ದು ತೆಲಂಗಾಣ ಸರ್ಕಾರ ಈಗಾಗಲೇ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ.

Click to comment

Leave a Reply

Your email address will not be published. Required fields are marked *