ಬೆಂಗಳೂರಿನ ಟೆಕ್ಕಿಯ ಶವ 4 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆ- ಕೆಲಸ ಹೋಗಿದ್ದಕ್ಕೆ ರಾಣಿ ಝರಿಗೆ ಹಾರಿ ಆತ್ಮಹತ್ಯೆ?

Public TV
2 Min Read
Bengaluru techie Bharat body traced in belthangady forest 1

ಚಿಕ್ಕಮಗಳೂರು: ಬೆಂಗಳೂರಿನ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಆತ ಕೆಲಸ (Job) ಕಳ್ಕೊಂಡಿದ್ದ.‌ ಕಂಪನಿ ಮುಂಗಡ ಸಂಬಳ (Salary) ನೀಡಿ ನಿಮ್ಮ ಸೇವೆ ತೃಪ್ತಿದಾಯಕವಾಗಿದೆ ಎಂದಿತ್ತು.‌ ಮನಸ್ಸಿಗೆ ಬೇಜಾರು ಮಾಡಿಕೊಂಡು ತನ್ನ‌ ಹೋಂಡಾ ಹಾರ್ನೆಟ್ ಬೈಕಿನಲ್ಲಿ ಕಾಫಿನಾಡಿಗೆ ಪ್ರವಾಸ ಬಂದಿದ್ದ. ರಾಣಿಝರಿ ಜಲಪಾತದ (Rani Jhari Falls) ಬಳಿ ಬೈಕ್, ಕೋಟ್, ಚಪ್ಪಲಿ, ಟೀಶರ್ಟ್ ಬಿಚ್ಚಿಟ್ಟು 3 ದಿನದಿಂದ ನಾಪತ್ತೆಯಾಗಿದ್ದ. ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮನೆಯವರು, ಪೊಲೀಸರು, ಸ್ಥಳೀಯರು ಹುಡುಕಾಡಿದರೂ ಸುಳಿವಿರಲಿಲ್ಲ. ಆದರೆ ಈಗ ಆತನ ಶವ ಪ್ರಪಾತದಲ್ಲಿ ಪತ್ತೆಯಾಗಿದೆ.

ಬೆಂಗಳೂರು ಮೂಲದ 30 ವರ್ಷದ ಟೆಕ್ಕಿ ಭರತ್‌ ಇತ್ತೀಚಿಗೆ ಕೆಲಸ ಕಳೆದುಕೊಂಡಿದ್ದ. ಸಂಸ್ಥೆ 3 ತಿಂಗಳ ಮುಂಗಡ ಸಂಬಳ ನೀಡಿ ಸೇವೆಯಿಂದ ಮುಕ್ತಿಗೊಳಿಸಿತ್ತು.‌ ಕೆಲಸ ಕಳೆದುಕೊಂಡಿದ್ದ ಆತ ಬೈಕ್‌ ಏರಿ ನೇರವಾಗಿ ಬಂದಿದ್ದು ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿ ಝರಿ ಇರುವ ಜಾಗಕ್ಕೆ.

Bengaluru techie Bharat body traced in belthangady forest 2

ಟ್ರಕ್ಕಿಂಗ್‌ ಬಂದಿದ್ದ ಭರತ್‌ ಡಿ.6 ರಿಂದ ನಾಪತ್ತೆಯಾಗಿದ್ದ ಆತ ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ರಾಣಿಝರಿ ಬಳಿ ಭರತ್ ಬೈಕ್ ಇತ್ತು.‌ ಬೈಕ್ ಬಳಿ ಮೊಬೈಲ್, ಟೀ ಶರ್ಟ್, ಚಪ್ಪಲಿ ಸಿಕ್ಕಿದ್ದವು. ಬೈಕ್‌ಗೆ ವೋಟರ್‌ ಐಡಿ ಕಾರ್ಡ್ ಮತ್ತು ಬ್ಯಾಗ್ ಸಿಕ್ಕಿಸಲಾಗಿತ್ತು.  ಇದನ್ನೂ ಓದಿ: ಹುಡುಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಟ್ಟ ದಲಿತ ಯುವಕನಿಗೆ ಶಾದಿಮಹಲ್‌ನಲ್ಲಿ ಹಲ್ಲೆ – ಪೋಕ್ಸೋ ಕೇಸ್‌ ದಾಖಲು

ಮಗ ಮನೆಗೂ ಬಂದಿಲ್ಲ, ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಮನೆಯವರು ಹುಡುಕಿಕೊಂಡು ಬಂದಿದ್ದರು. ಬಾಳೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ರಾಣಿ ಝರಿ ಬಳಿಯ ಸುಮಾರು 3 ಸಾವಿರ ಅಡಿ ಎತ್ತರದ ಬೆಟ್ಟದಿಂದ ಭರತ್‌ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿ ಹುಡುಕಾಟ ಆರಂಭವಾಗಿತ್ತು. ಅರಣ್ಯ ಇಲಾಖೆ, ಪೊಲೀಸ್, ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ, ಬಣಕಲ್ ಸಮಾಜ ಸೇವಕ ಆರೀಫ್ ಮತ್ತು ಸ್ಥಳಿಯರು ಏಳು ಡ್ರೋನ್ ಕ್ಯಾಮರಾ ಬಳಸಿ ಹುಡುಕಾಡಿದ್ದು ಯುವಕ ಶವ ಪ್ರಪಾತದಲ್ಲಿ ಪತ್ತೆಯಾಗಿದೆ.

ಶೋಧ ಕಾರ್ಯ ನಡೆಸುತ್ತಿದ್ದ 25 ಜನರ ತಂಡ ಬೆಳ್ತಂಗಡಿಯ ಮೈದಾಡಿ ಕಡೆಯಿಂದ ಬೆಟ್ಟವನ್ನು ಇಳಿದು ಅರಣ್ಯದಲ್ಲಿ ಶವವನ್ನ ಪತ್ತೆ ಹಚ್ಚಿದ್ದಾರೆ. ಸುಮಾರು 4 ಸಾವಿರ ಅಡಿಯಿಂದ ಯುವಕ ಕೆಳಗೆ ಬಿದ್ದಿದ್ದು, ಆತನ ದೇಹ ಛಿದ್ರವಾಗಿದ್ದು, ಕೊಳೆತುಹೋಗಿದೆ. ಮೃತದೇಹ ವ್ಯೂ ಪಾಯಿಂಟ್‌ ನೇರವಾಗಿರುವ ಪ್ರಪಾತದಲ್ಲಿಯೇ ಪತ್ತೆಯಾಗಿದ್ದು, ಭರತ್ ವ್ಯೂ ಪಾಯಿಂಟ್ ಬಳಿಯಿಂದಲೇ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ.

ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಸಾವಿನ ಸುತ್ತ ಅನುಮಾನದ ಹುತ್ತ ಇದೆಯೋ ಗೊತ್ತಿಲ್ಲ. ಪೊಲೀಸರಾಗಲಿ ಅಥವಾ ಕುಟುಂಬಸ್ಥರಾಗಲಿ ಭರತ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು‌ ಅಧಿಕೃತವಾಗಿ ಹೇಳಿಲ್ಲ.

 

Share This Article