ಬೆಂಗಳೂರು: ಹಿಂದಿ ಭಾಷೆಯ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ, ಸರ್ವ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿಯನ್ನು ಒತ್ತಾಯ ಪೂರ್ವಕವಾಗಿ ಹೇರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ, ಇದು ಆರು ಕೋಟಿ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ವಿಧಾನ ಪರಿಷತ್ ಮಾಜಿ ಶಾಸಕರಾದ ಟಿ. ಎ. ಶರವಣ ತಿಳಿಸಿದರು.
ಶರವಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಕನ್ನಡದ ಉಳಿವಿಗಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ನೆಲ -ಜಲ -ಭಾಷೆಯ ಉಳಿವಿನ ಬಗ್ಗೆ ಪ್ರಶ್ನೆ ಬಂದರೆ, ಜೆಡಿಎಸ್ ಪಕ್ಷ ತನ್ನ ಸಂಪೂರ್ಣ ಬೆಂಬಲ ನೀಡಿ ನಮ್ಮ ಜನತೆಗೆ ಬೆಂಗಾವಲಾಗಿ ನಿಲ್ಲುತ್ತಾ ಬಂದಿದೆ, ಮುಂಬರುವ ದಿನಗಳಲ್ಲೂ ಪೂರ್ಣ ಬೆಂಬಲ ನೀಡುತ್ತದೆ ಎಂದರು.
ದೇಶಕ್ಕೆ ಕನ್ನಡಿಗನನ್ನು ಪ್ರಧಾನ ಮಂತ್ರಿಯಾಗಿ ಕೊಟ್ಟ ನಮ್ಮ ಪಕ್ಷ, ಮುಂದೆ ಇಂತಹ ಸೌಭಾಗ್ಯ ನಮ್ಮ ಕನ್ನಡಕ್ಕೆ ದೊರಕುತ್ತದೆ ಎಂಬುದು ಸಂಶಯ, ಅಂತಹ ಪ್ರಾದೇಶಿಕ ಪಕ್ಷ ಯಾವುದೇ ಸಂದರ್ಭದಲ್ಲಿ ಯಾರಿಗೂ ಹೆದರದೆ ನಮ್ಮ ಜನರ ರಕ್ಷಣೆಗೆ ಪಣತೊಟ್ಟು ನಿಲ್ಲುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಎಲ್ಲ ಭಾಷೆಯನ್ನು ಗೌರವಿಸುತ್ತೇವೆ, ಯಾವುದೇ ಹೇರಿಕೆ ಸಲ್ಲದು: ಧನಂಜಯ್
ಸಾಹಿತ್ಯ ಸಂಸ್ಕೃತಿಯಲ್ಲಿ, ಕಲೆಯಲ್ಲಿ ಉತ್ತುಂಗದಲ್ಲಿರುವ ನಮ್ಮ ಭಾಷೆಗೆ ಕಿಂಚಿತ್ತು ಚ್ಯುತಿ ಬರಲು ನಮ್ಮ ಜೆಡಿಎಸ್ ಪಕ್ಷ ಎಂದು ಬಿಡುವುದಿಲ್ಲ. ಇದು ಹೀಗೆ ಮುಂದುವರಿದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ಹೋರಾಟ ನಡೆಸುವುದಾಗಿ ಶರವಣ ಎಚ್ಚರಿಕೆ ನೀಡಿದರು.