ಬೆಂಗಳೂರು: ಅನರ್ಹ ಶಾಸಕ ಸುಧಾಕರ್ ಕ್ಷೇತ್ರಕ್ಕೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಂದ ಎರಡೆರಡು ಗಿಫ್ಟ್ ನೀಡಲಾಗುತ್ತಿದೆ. ಈ ಮೂಲಕ ಸಿಎಂ ಅನರ್ಹ ಶಾಸಕರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಇಂದು ಚಿಕ್ಕಬಳ್ಳಾಪುರ ಕ್ಷೇತ್ರ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮೂಲಕ ಮೊದಲ ಗಿಫ್ಟ್ ಕೊಡಲಿರುವ ಬಿಎಸ್‍ವೈ ಸರ್ಕಾರ. ಇದರ ಜೊತೆಗೆ ಮಂಚೇನಹಳ್ಳಿಯನ್ನು ಹೊಸ ತಾಲೂಕಾಗಿ ಇಂದೇ ಘೋಷಣೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಮೂಲಕ ಅನರ್ಹ ಶಾಸಕ ಸುಧಾಕರ್ ಗೆ ಡಬಲ್ ಧಮಾಕಾ ನೀಡಲು ಮುಂದಾಗಿದೆ ಎನ್ನಲಾಗಿದೆ.
ಈ ಹಿಂದೆ ಈ ಎರಡು ವಿಚಾರದಲ್ಲೂ ಸುಧಾಕರ್ ಅವರು ಯಡಿಯೂರಪ್ಪಗೆ ಒತ್ತಡ ಹಾಕಿದ್ದರು. ಹಾಗಾಗಿ ಸುಧಾಕರ್ ಒತ್ತಾಯಕ್ಕೆ ಮಣಿದು ಯಡಿಯೂರಪ್ಪನವರು ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಮಂಚೇನಹಳ್ಳಿ ಹೊಸ ತಾಲೂಕು ಮಾಡಲು ಒಪ್ಪಿಗೆ ಸೂಚಿಸಿದ್ದರು. ಇದಾದ ಬಳಿಕ ಸುಧಾಕರ್ ಅವರ ಮನವಿಯಂತೆ ಅವರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿದ್ದ ಬಿಎಸ್‍ವೈ ಇಂದು ಅದರ ಶಂಕುಸ್ಥಾಪನೆಯನ್ನು ಕೂಡ ಮಾಡಲಿದ್ದಾರೆ.
ಮೆಡಿಕಲ್ ಕಾಲೇಜು ಮತ್ತು ಮಂಚೇನಹಳ್ಳಿ ತಾಲೂಕು ಈ ಎರಡು ಗಿಫ್ಟ್ ಗಳ ಮೂಲಕ ಕಾಂಗ್ರೆಸ್ ನ ಇಬ್ಬರು ನಾಯಕರಿಗೆ ಸುಧಾಕರ್ ಸೆಡ್ಡುಹೊಡೆದಿದ್ದಾರೆ. ಮೊದಲಿಗೆ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಪಡೆಯುವ ಮೂಲಕ ಡಿಕೆಶಿಗೆ ಸೆಡ್ಡು ಹೊಡೆದ ಸುಧಾಕರ್, ಮಂಚೇನಹಳ್ಳಿ ತಾಲೂಕು ಘೋಷಣೆ ಮೂಲಕ ಕೈ ಶಾಸಕ ಶಿವಶಂಕರ್ ರೆಡ್ಡಿಗೆ ಸುಧಾಕರ್ ಟಾಂಗ್ ನೀಡಿದ್ದಾರೆ.