ಬೆಂಗಳೂರು: ಅಮೃತಹಳ್ಳಿಯ (Amrutahalli) ಕಾಲೇಜೊಂದರಲ್ಲಿ (College) ನಡೆದಿದ್ದ ಸೆಕ್ಯೂರಿಟಿ ಗಾರ್ಡ್ (Security Guard) ಜೈಕಿಶೋರ್ ರಾಯ್ ಕೊಲೆ ಪ್ರಕರಣದಲ್ಲಿ, ಆರೋಪಿ ವಿದ್ಯಾರ್ಥಿ ಭಾರ್ಗವ್ ಪೊಲೀಸರ ವಿಚಾರಣೆ ವೇಳೆ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾನೆ. ಕಾಲೇಜಿನ ವಿದ್ಯಾರ್ಥಿನಿಯರ ಮುಂದೆ ಸೆಕ್ಯೂರಿಟಿ ಗಾರ್ಡ್ ತಡೆದಿದ್ದಕ್ಕೆ ಆತನನ್ನು ಚಾಕು ಇರಿದು ಹತ್ಯೆಗೈದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಕಾಲೇಜಿನಲ್ಲಿ ಕಾನ್ವೋಕೇಶನ್ ಡೇ ಆಯೋಜಿಸಲಾಗುತ್ತಿತ್ತು. ಈ ವೇಳೆ ಭಾರ್ಗವ್ ಮದ್ಯಪಾನ ಮಾಡಿ ಪದೇ ಪದೇ ಓಡಾಟ ಮಾಡುತ್ತಿದ್ದ. ಕಾರ್ಯಕ್ರಮ ಮುಗಿಯುವವರೆಗೂ ಓಡಾಟ ಮಾಡದಂತೆ ಆತನಿಗೆ ಸೂಚಿಸಲಾಗಿತ್ತು. ಆದರೂ ಮಾತು ಕೇಳದೆ ಪದೇ ಪದೇ ಆರೋಪಿ ಭಾರ್ಗವ್ ಕಾಲೇಜಿನ ಆವರಣದಲ್ಲಿ ಓಡಾಟ ನಡೆಸಿದ್ದ. ಈ ವೇಳೆ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಜೈಕಿಶೋರ್ ರಾಯ್ ಅವರು ಆತನನ್ನು ತಡೆದು ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಭಾರ್ಗವ್ ಸೆಕ್ಯೂರಿಟಿ ಜೊತೆ ಗಲಾಟೆ ಮಾಡಿ, ಬಳಿಕ ಪಿಜಿಗೆ ತೆರಳಿ ಚಾಕು ತಂದು ಸೆಕ್ಯೂರಿಟಿಗೆ ಚುಚ್ಚಿ ಹತ್ಯೆಗೈದಿದ್ದ. ಇದನ್ನೂ ಓದಿ: ಬೆಂಗಳೂರು; ಮದ್ಯ ಸೇವಿಸಿ ಕಾಲೇಜಿಗೆ ಬಂದಿದ್ದಾನೆಂದು ತಡೆದಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ
ಹತ್ತಾರು ಜನರ ಎದುರೇ ಆರೋಪಿ ಏಕಾಏಕಿ ಚಾಕುವಿನಿಂದ ಇರಿದಿದ್ದ. ಈ ವೇಳೆ ಆತನನ್ನು ತಡೆಯಲು ಇತರೇ ಸಿಬ್ಬಂದಿ ಯತ್ನಿಸಿದ್ದರು. ಆದರೆ ಅಷ್ಟರಲ್ಲಾಗಲೇ ಆತ ಹಲವು ಬಾರಿ ಚಾಕು ಇರಿದಿದ್ದು, ಸೆಕ್ಯೂರಿಟಿ ಗಾರ್ಡ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಸ್ಸಾಂ ಮೂಲದ ಭಾರ್ಗವ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ. ಆತ ಪಿಜಿಯಲ್ಲಿ ವಾಸವಿದ್ದ. ಪೋಷಕರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಕೊಲೆಯಾದ ಕಿಶೋರ್ ಉತ್ತರ ಭಾರತ ಮೂಲದವರಾಗಿದ್ದು, ಕಳೆದ ಹತ್ತು ವರ್ಷಗಳಿಂದ ಇದೇ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಕಾಲೇಜಿನ ಭದ್ರತಾ ಲೋಪವೇ ಈ ಸಾವಿಗೆ ಕಾರಣ ಎಂದು ಮೃತ ಕಿಶೋರ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಆರೋಪಿಯನ್ನು ಅಮೃತಹಳ್ಳಿ ಪೊಲೀಸರು (Amrutahalli Police) ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪೊಲೀಸರ ಹತ್ಯಾಕಾಂಡ ಪ್ರಕರಣ – 9 ವರ್ಷಗಳ ಬಳಿಕ ನಕ್ಸಲ್ ಕೋಮುಲು ಅರೆಸ್ಟ್