ಬೆಂಗಳೂರು: ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದು, ಇದೀಗ ಮಾಜಿ ಸಿಎಂ ಅವರು ತಮ್ಮ ಸಂಖ್ಯಾ ಬಲ ಹೆಚ್ಚಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿಯೊಂದು ಲಭಿಸಿದೆ.
ಈ ಮೂಲಕ ಮೇ 23ರ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗುತ್ತಾ ಅನ್ನೋ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಮೂಡಿದೆ. ಒಂದೇ ಏಟಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಶಾಕ್ ನೀಡಲಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಸಿದ್ದರಾಮಯ್ಯ ಅವರು ಜೆಡಿಎಸ್ ಜೊತೆ ಇದ್ದುಕೊಂಡೇ ರಣತಂತ್ರ ಹೆಣೆಯುತ್ತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಸಿದ್ದರಾಮಯ್ಯ ಆ್ಯಂಡ್ ಟೀಂ ತಮ್ಮ ಬಲ ಹೆಚ್ಚಿಸಿಕೊಳ್ಳಲು ರಣತಂತ್ರ ಹೆಣೆಯುತ್ತಿದೆ. ಬಿಜೆಪಿಯ 13, ಜೆಡಿಎಸ್‍ನ 7 ಶಾಸಕರಿಗೆ ಆಪರೇಷನ್ ಮಾಡಲು ಸಿದ್ದು ಟೀಂ ರೆಡಿಯಾಗಿದೆ. ಉತ್ತರ ಕರ್ನಾಟಕದ 8, ಹಳೆ ಮೈಸೂರು ಭಾಗದ 7 ಶಾಸಕರ ಸೆಳೆಯಲು ಯತ್ನಿಸಲಾಗುತ್ತಿದೆ. ಮಧ್ಯ ಕರ್ನಾಟಕ, ಬೆಂಗಳೂರಿನ 5 ಶಾಸಕರಿಗೆ ಆಪರೇಷನ್ ಮಾಡಲು ಮಾಸ್ಟರ್ ಪ್ಲಾನ್ ನಡೆಯುತ್ತಿದ್ದು, ಇದರಿಂದ ಸಿದ್ದರಾಮಯ್ಯ ಬಲವನ್ನ 100ಕ್ಕೆ ಹೆಚ್ಚಿಸಿಕೊಳ್ಳಲು ತಂಡ ಎಲ್ಲಾ ರೀತಿಯ ಯೋಜನೆಗಳನ್ನು ಹಾಕಿಕೊಂಡಿದೆ ಎನ್ನಲಾಗಿದೆ.