ಬೆಂಗಳೂರು: ಜೆಡಿಎಸ್ ಸದಸ್ಯ ಸರವಣ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿರುದ್ಧ ಅಸಾಂವಿಧಾನಿಕ ಪದ ಬಳಸಿ ಬಳಿಕ ಅ ಹೇಳಿಕೆಯನ್ನು ವಾಪಸ್ ಪಡೆದ ಪ್ರಸಂಗ ವಿಧಾನ ಪರಿಷತ್‍ನಲ್ಲಿ ನಡೆಯಿತು. ಬಳಿಕ ಸರವಣ ಬಳಸಿದ ಪದವನ್ನು ಸಭಾಪತಿಗಳು ಕಡತದಿಂದಲೇ ತೆಗೆಯುವಂತೆ ಆಯಿತು.
ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸರವಣ ಸಿಎಎ ತರುವ ಮೊದಲು ಜನರನ್ನು ವಿಶ್ವಾಸಕ್ಕೆ ಪಡೆಯದೇ ತುರ್ತುಪರಿಸ್ಥಿತಿ ತರುವ ರೀತಿ ಜಾರಿಗೆ ತರಲಾಗಿದೆ. ಪ್ರತಿಭಟಿಸುವ ಹಕ್ಕು ಮೊಟಕುಗೊಳಿಸಲಾಗಿದೆ. ಸಿಎಎ ವಿರುದ್ಧ ಹೋರಾಟ ನಡೆಸುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಭಟನೆಗೆ ವಿರೋಧವಿಲ್ಲ. ಆದರೆ ಪಾಕಿಸ್ತಾನ ಪರ ಘೋಷಣೆ ಕೂಗಿದರೆ, ಭಾರತ ವಿರುದ್ಧ ದಿಕ್ಕಾರ ಎನ್ನುವ ಘೋಷಣೆ ಕೂಗಿದರೆ ಸರ್ಕಾರ ಸಹಿಸಲ್ಲ. ಯಾರೇ ಆದರೂ ಅವರನ್ನು ಜೈಲಿಗೆ ಕಳಿಸುತ್ತೇವೆ. ಅವರ ವಿರುದ್ಧ ಕೇಸು ಹಾಕುತ್ತೇವೆ. ಇದು ಹೇಡಿ ಸರ್ಕಾರ ಅಲ್ಲ. ವೋಟಿಗೋಸ್ಕರ ಏನನ್ನು ಬೇಕಾದರೂ ಸಹಿಸುವ ಧೋರಣೆ ನಮ್ಮದ್ದಲ್ಲ ಎಂದು ಎಚ್ಚರಿಕೆ ಕೊಟ್ಟರು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಆಗುವುದಿಲ್ಲ ಎಂದರು.
ಬಳಿಕ ಮಾತು ಮುಂದುವರಿಸಿದ ಸರವಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಮುಸ್ಲಿಂ ಜನರಿಗೆ ಅಭಿವೃದ್ಧಿ ಕೆಲಸ ಮಾಡಲ್ಲ ಎನ್ನುತ್ತಾರೆ. ಅವರೇನು ಹಣವನ್ನು ಅವರ ಅಪ್ಪನ ಮನೆಯಿಂದ ತರುತ್ತಾರಾ ಎಂದು ಅಸಾಂವಿಧಾನಿಕ ಪದ ಬಳಕೆ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪದ ಬಳಕೆ ಬಗ್ಗೆ ಹಿಡಿತವಿರಲಿ ಏನು ಮಾತನಾಡುತ್ತಿದ್ದೀರಾ? ನಾವೂ ನಿಮಗೆ ಹಾಗೇ ಅಂದರೆ ಸಹಿಸುತ್ತೀರಾ ಎಂದು ಸರವಣ ವಿರುದ್ಧ ವಾಗ್ದಾಳಿ ನಡೆಸಿದರು.
ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಸರವಣ ಬಳಸಿದ ಪದ ತಪ್ಪು. ಹಾಗೆ ಮಾತನಾಡಿದ್ದು ಸರಿಯಲ್ಲ. ಪದ ವಾಪಸ್ ಪಡೆಯಿರಿ ಎಂದು ಸಲಹೆ ನೀಡಿದರು. ಹೊರಟ್ಟಿ ಮಾತಿನ ನಂತರ ನನ್ನ ಹೇಳಿಕೆ ವಾಪಸ್ ಪಡೆಯುತ್ತಿದ್ದೇನೆ ಎಂದು ಸರವಣ ಹೇಳಿದರು. ವಾಪಸ್ ಪಡೆದ ನಂತರ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅಸಾಂವಿಧಾನಿಕ ಪದವನ್ನು ಕಡತದಿಂದ ತೆಗೆಯುವಂತೆ ರೂಲಿಂಗ್ ನೀಡಿದರು.
ಇಷ್ಟಾದರೂ ಸದನದಲ್ಲಿ ಜೆಡಿಎಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಿನಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಸರವಣ ಬಿಜೆಪಿಯ ಪ್ರಾಣೇಶ್ ವಿರುದ್ಧ ಹರಿಹಾಯ್ದರು. ನನ್ನ ಬಗ್ಗೆ ಮಾತಾಡುವ ನೈತಿಕತೆ ನಿನಗೂ ಇಲ್ಲ, ನಿನಗೆ ಮಾತನಾಡಲು ಬರಲ್ಲ ಎಂದು ಏಕವಚನದಲ್ಲಿ ಬೈದಾಡಿಕೊಂಡರು. ನಂತರ ಸಭಾಪತಿ ಸೂಚನೆಯಂತೆ ಮಾತು ಮುಂದುವರಿಸಿದ ಸರವಣ, ನೊಂದು ಅಂತಹ ಪದ ಬಳಸಿದೆ, ಯಾವುದೇ ಬೇರೆ ಉದ್ದೇಶವಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.