ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಒಂದು ಕಡೆಯಿಂದ ಹುಡುಕಾಡಿದರೂ ಡ್ಯಾನ್ಸ್ ಬರೋ ನಾಯಕರ ಸಂಖ್ಯೆ ಕಡಿಮೆಯಿದೆ. ಕಷ್ಟಪಟ್ಟು, ಅನಿವಾರ್ಯತೆಗೆ ಬಿದ್ದು ಕುಣಿದಂತೆ ಮಾಡುವವರು ಕೂಡ ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುತ್ತಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರಂತಹ ನಟರು ಡ್ಯಾನ್ಸಿನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಕಿಸ್ ಚಿತ್ರದ ಮೂಲಕವೇ ನಾಯಕನಾಗಿ ಎಂಟ್ರಿ ಕೊಡುತ್ತಿರೋ ವಿರಾಟ್ ಕೂಡ ಆ ಸಾಲಿಗೆ ಸೇರಿಕೊಳ್ಳುವಂಥಾ ನಟನೆಂಬುದರಲ್ಲಿ ಎರಡು ಮಾತಿಲ್ಲ.
ಎ.ಪಿ ಅರ್ಜುನ್ ನಿದೇಶನದಲ್ಲಿ ಮೂಡಿ ಬಂದಿರೋ ಕಿಸ್ ಚಿತ್ರ ಆರಂಭ ಕಾಲದಿಂದಲೂ ಸುದ್ದಿ ಮಾಡುತ್ತಲೇ ಬಂದಿತ್ತು. ಆದರೆ ಅದರ ಭರಾಟೆ ಜೋರಾಗಿಯೇ ಶುರುವಾಗಿರುವುದು ಹಾಡುಗಳು ಹೊರ ಬಂದ ನಂತರವೇ. ಕಿಸ್ ಚಿತ್ರದ ಹಾಡುಗಳಲ್ಲಿ ಮೊದಲನೆಯದ್ದಾಗಿ ಹೊರ ಬಂದಿದ್ದು ‘ಶೀಲಾ ಸುಶೀಲ ಯೂ ಡೋಂಟುವರಿ’ ಎಂಬ ಹಾಡು. ಇದರ ಸಂಗೀತ, ಸೌಂಡಿಂಗ್ ಮತ್ತು ದೃಶ್ಯ ವೈಭವ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಹೆಚ್ಚು ವೀಕ್ಷಣೆ ಪಡೆದು ಟ್ರೆಂಡಿಂಗ್‍ನಲ್ಲಿದ್ದ ಈ ಹಾಡಿನಲ್ಲಿ ವಿರಾಟ್ ಮಾಡಿದ್ದ ಸಖತ್ ಡ್ಯಾನ್ಸ್‍ಗಂತೂ ನೋಡುಗರೆಲ್ಲ ಫಿದಾ ಆಗಿದ್ದರು.
ಈ ಹಾಡನ್ನು ನೋಡಿದ ಎಲ್ಲರೂ ಕೂಡ ವಿರಾಟ್ ಡ್ಯಾನ್ಸ್ ನೋಡಿ ಕನ್ನಡಕ್ಕೋರ್ವ ಡ್ಯಾನ್ಸಿಂಗ್ ಸ್ಟಾರ್ ಆಗಮನವಾಯಿತೆಂದೇ ಮಾತಾಡಿಕೊಂಡಿದ್ದರು. ಮೂಲತಃ ಡ್ಯಾನ್ಸರ್ ಆಗಿರೋ ವಿರಾಟ್ ಈ ಹಾಡಿನ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ಡ್ಯಾನ್ಸ್ ಮಾತ್ರವಲ್ಲದೇ ನಟನೆಯಲ್ಲಿಯೂ ವಿರಾಟ್ ಫುಲ್ ಮಾರ್ಕ್ಸ್ ತೆಗೆದುಕೊಳ್ಳುವಂತೆಯೇ ನಟಿಸಿದ್ದಾರಂತೆ. ಅದೆಲ್ಲವೂ ಇದೇ ತಿಂಗಳ 27ನೇ ತಾರೀಕಿನಂದು ಪ್ರೇಕ್ಷಕರೆದುರು ಅನಾವರಣಗೊಳ್ಳಲಿದೆ.