Connect with us

ನೋವನ್ನು ನಗೆಯಿಂದ ಶೃಂಗರಿಸಿಕೊಂಡ ಭರ್ಜರಿ ಬ್ರಹ್ಮಚಾರಿ!

ನೋವನ್ನು ನಗೆಯಿಂದ ಶೃಂಗರಿಸಿಕೊಂಡ ಭರ್ಜರಿ ಬ್ರಹ್ಮಚಾರಿ!

ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಬ್ರಹ್ಮಚಾರಿ ಚಿತ್ರ ತೆರೆ ಕಂಡಿದೆ. ಸಂಪೂರ್ಣವಾಗಿ ನಗುವಿನೊಂದಿಗೆ ಫಾಮಿಲಿ ಪ್ಯಾಕೇಜಿನಂತೆ ಮೂಡಿ ಬಂದಿರುವ ಬ್ರಹ್ಮಚಾರಿಯನ್ನು ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಈ ಹಿಂದೆಯೇ ಟೀಸರ್ ಮತ್ತು ಟ್ರೇಲರ್ ಗಳ ಮೂಲಕ ಬ್ರಹ್ಮಚಾರಿ ಕಥೆಯ ಬಗ್ಗೆ ಒಂದು ಅಂದಾಜು ಪ್ರೇಕ್ಷಕರಲ್ಲಿ ಮೂಡಿಕೊಂಡಿತ್ತು. ಆದರೆ ಇಲ್ಲಿ ಅದ್ಯಾವುದಕ್ಕೂ ನಿಲುಕದಂತಹ ಸೊಗಸಾದ ಕಥೆಯಿದೆ. ನಿರ್ಮಾಪಕ ಉದಯ್ ಕೆ ಮೆಹ್ತಾರ ಅದ್ಧೂರಿ ನಿರ್ಮಾಣ, ಚಂದ್ರಮೋಹನ್ ಅವರ ಮಾಂತ್ರಿಕ ನಿರ್ದೇಶನ ಮತ್ತು ನೀನಾಸಂ ಸತೀಶ್, ಅದಿತಿ ಪ್ರಭುದೇವ ಅವರ ಚೆಂದದ ನಟನೆಯೊಂದಿಗೆ ಬ್ರಹ್ಮಚಾರಿ ಕಳೆಗಟ್ಟಿಕೊಂಡಿದ್ದಾನೆ.

ಬ್ರಹ್ಮಚಾರಿಗಿರೋದು ಯಾವ ಸಮಸ್ಯೆ ಅನ್ನೋದು ಪ್ರೇಕ್ಷಕರಿಗೆಲ್ಲ ಈ ಹಿಂದೆಯೇ ಗೊತ್ತಾಗಿ ಹೋಗಿತ್ತು. ಆದರೆ ಯಾರೂ ಊಹಿಸಿರದ ರೀತಿಯಲ್ಲಿ ಚಂದ್ರಮೋಹನ್ ಈ ಸಿನಿಮಾವನ್ನು ರೂಪಿಸಿದ್ದಾರೆ. ಯಾರೊಂದಿಗೂ ಹೇಳಿಕೊಳ್ಳಲು ಮುಜುಗರ ಪಡುವಂತಹ ಲೈಂಗಿಕ ಸಮಸ್ಯೆಗಳ ಬಗ್ಗೆ ಎಂಬತ್ತರ ದಶಕದಲ್ಲಿಯೇ ಒಂದಷ್ಟು ಸಿನಿಮಾಗಳು ಬಂದಿದ್ದವು. ಕಾಶೀನಾಥ್ ಅಂಥಾದ್ದೊಂದು ಪರಿಣಾಮಕಾರಿ ಪ್ರಯೋಗಗಳನ್ನು ಮಾಡಿದ ಮೊದಲಿಗರಾಗಿಯೂ ಗುರುತಿಸಿಕೊಂಡಿದ್ದಾರೆ. ಬ್ರಹ್ಮಚಾರಿ ಅದೇ ಜಾಡಿನಲ್ಲಿದ್ದರೂ ಅಪರೂಪದ ಚಿತ್ರವಾಗಿ ದಾಖಲಾಗುವಂತಿದೆ.

ಈ ಚಿತ್ರದಲ್ಲಿ ನೀನಾಸಂ ಸತೀಶ್ ರಾಮು ಎಂಬ ಪಾತ್ರಕ್ಕೆ ಜೀವ ತುಂಬಿದ್ದರೆ, ಅದಿತಿ ಪ್ರಭುದೇವ ಸುನೀತಾ ಕೃಷ್ಣಮೂರ್ತಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ರಾಮು ಶ್ರೀರಾಮಚಂದ್ರನ ಭಕ್ತ. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಶ್ರೀರಾಮ ಚಂದ್ರನ ಆದರ್ಶಗಳನ್ನು ಪಾಲಿಸುತ್ತಾ ಮುಂದುವರಿಯುವ ಪ್ರತಿಜ್ಞೆಯನ್ನೂ ಕೈಗೊಂಡಿರುವಾತ. ಆದರೆ ಕಾಲ ಸರಿದು ಬೆಳೆದು ನಿಂತ ರಾಮುಗೆ ಸುನಿತಾ ಕೃಷ್ಣಮೂರ್ತಿ ಎಂಬ ಹುಡುಗಿಯ ಪರಿಚಯವಾಗುತ್ತದೆ. ಆಕೆ ಯುವ ಬರಹಗಾರ್ತಿಯಾಗಿದ್ದುಕೊಂಡು ಒಂದಷ್ಟು ಖ್ಯಾತಿ ಹೊಂದಿರೋ ಹುಡುಗಿ. ಸೂಕ್ಷ್ಮ ಮನಸ್ಥಿತಿಯವಳೂ ಹೌದು. ಇಂತಹ ಸುನೀತಾಳೆಂದಿಗಿನ ರಾಮುವಿನ ಪರಿಚಯ ಮದುವೆಯ ಹೊಸ್ತಿಲು ದಾಟಿಕೊಳ್ಳುತ್ತದೆ. ಹಾಗೆ ಇವರಿಬ್ಬರು ಮದುವೆಯಾಗಿ ಪ್ರಸ್ಥದ ಕೋಣೆ ತಲುಪಿಕೊಳ್ಳುತ್ತಲೇ ಬ್ರಹ್ಮಚಾರಿಯ ಸಮಸ್ಯೆಯೊಂದಿಗೆ ಅಸಲೀ ಕಥೆಯೂ ಆರಂಭವಾಗುತ್ತದೆ.

ಇಲ್ಲಿ ರಾಮುವನ್ನು ಬಾಧಿಸುತ್ತಿರೋ ಲೈಂಗಿಕ ಸಮಸ್ಯೆಯ ಸುತ್ತ ಕಥೆ ಬಿಚ್ಚಿಕೊಂಡರೂ ಎಲ್ಲಿಯೂ ವಲ್ಗಾರಿಟಿಯ ಸೋಂಕಿಲ್ಲ. ಚುರುಕಿನ ನಿರೂಪಣೆ, ಅದಕ್ಕೆ ತಕ್ಕುದಾದಂತಹ ಸಂಭಾಷಣೆಗಳೊಂದಿಗೆ ಇಲ್ಲಿನ ದೃಶ್ಯಗಳು ಭರಪೂರ ನಗುವಿನೊಂದಿಗೆ ಮುಂದುವರಿಯುತ್ತದೆ. ಇದರಲ್ಲಿಯೇ ಊಹಿಸಲಾಗದ ಟ್ವಿಸ್ಟುಗಳನ್ನಿಡುವ ಮೂಲಕ ನಿರ್ದೇಶಕರು ಈ ನಗುವಿನ ಯಾನವನ್ನು ಮತ್ತಷ್ಟು ರೋಚಕವಾಗಿಸಿದ್ದಾರೆ. ಇಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ತಮ್ಮ-ತಮ್ಮ ಪಾತ್ರಗಳನ್ನು ನಿರ್ವಹಿಸಿರುವ ರೀತಿ. ಅವರಿಬ್ಬರೂ ನಟಿಸಿರುವ ಸೊಗಸೇ ಈ ಚಿತ್ರದ ಪ್ರಧಾನ ಶಕ್ತಿ. ನೀನಾಸಂ ಸತೀಶ್‍ರಂತಹ ಲೀಡ್ ನಟರು ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳೋದೇ ಅಪರೂಪ. ಅಂತಹದ್ದನ್ನು ಒಪ್ಪಿಕೊಂಡು, ಆ ಪಾತ್ರವನ್ನೇ ಒಳಗಿಳಿಸಿಕೊಂಡಂತೆ ನಟಿಸಿರೋ ರೀತಿ ಯಾರನ್ನಾದರೂ ಸೆಳೆಯುವಂತಿದೆ.

ಬ್ರಹ್ಮಚಾರಿಯ ಮೂಲಕ ನಿರ್ದೇಶಕ ಚಂದ್ರಮೋಹನ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ತಾವು ಕಾಮಿಡಿ ಜಾಣರಿಗೇ ಹೊಸ ದಿಕ್ಕು ತೋರಿಸಬಲ್ಲ ಕಸುವು ಹೊಂದಿರುವ ನಿರ್ದೇಶಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಛಾಯಾಗ್ರಹಣ, ಧರ್ಮವಿಶ್ ಸಂಗೀತ, ಹಿನ್ನೆಲೆ ಸಂಗೀತ ಎಲ್ಲವೂ ಇದರ ಅಂದ ಹೆಚ್ಚಿಸಿವೆ. ಶಿವರಾಜ್ ಕೆ ಆರ್ ಪೇಟೆ, ಅಚ್ಯುತ್ ಕುಮಾರ್, ದತ್ತಣ್ಣನ ಪಾತ್ರಗಳೂ ತಲೆದೂಗುವಂತೆ ಮೂಡಿ ಬಂದಿವೆ. ಇದು ಔಟ್ ಆಂಡ್ ಔಟ್ ನಗು ತುಂಬಿಕೊಂಡಿರೋ ಚಿತ್ರ. ಮನಸಾರೆ ನಕ್ಕು ಹಗುರಾಗೋ ಅವಕಾಶವನ್ನು ಖಂಡಿತಾ ಕಳೆದುಕೊಳ್ಳಬೇಡಿ.

ರೇಟಿಂಗ್: 4/5

Advertisement
Advertisement