ಬೆಂಗಳೂರು: ನಗರದಲ್ಲಿ(Bengaluru) ಸುರಿದ ಭಾರೀ ಮಳೆಯಿಂದಾಗಿ (Rain) ಗೊರಗುಂಟೆಪಾಳ್ಯ (Goraguntepalya) ಸಿಗ್ನಲ್ ಬಳಿ ಲಾರಿ ಮೇಲೆ ಬೃಹತ್ ಮರವೊಂದು (Tree) ಮುರಿದು ಬಿದ್ದಿದೆ. ಇದರಿಂದ ಸುಮ್ಮನಹಳ್ಳಿ – ತುಮಕೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಬೆಳಗಿನ ಜಾವ 5:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಿಗ್ನಲ್ನಲ್ಲಿ ಎರಡು ಕಾರು ಒಂದು ಲಾರಿ ನಿಂತಿದ್ದವು. ಈ ವೇಳೆ ಲಾರಿ ಮೇಲೆ ಮರ ಬಿದ್ದಿದೆ. ಲಾರಿ ಮೇಲೆ ಮರ ಬಿದ್ದಿದ್ದರಿಂದ ಎರಡು ಕಾರುಗಳು ಅಪಾಯದಿಂದ ಪಾರಾಗಿವೆ. ಅಕಸ್ಮಾತ್ ಮರ ಕಾರುಗಳ ಮೇಲೆ ಬಿದ್ದಿದ್ದರೆ ಭಾರೀ ಹಾನಿಯಾಗುವ ಸಾಧ್ಯತೆ ಇತ್ತು. ಇನ್ನೂ, ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ರಾತ್ರಿಯ ಧಾರಾಕಾರ ಮಳೆಗೆ ಬೆಂಗಳೂರು ತತ್ತರ – ರಸ್ತೆಯಲ್ಲಿ ನದಿಯಂತೆ ಹರಿದ ನೀರು
ಗೊರಗುಂಟೆಪಾಳ್ಯ – ಔಟರ್ ರಿಂಗ್ ರೋಡ್ ವಾಹನ ಸಂಚಾರ ಬಂದ್ ಆಗಿದ್ದು, ಜಿಬಿಎ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸರು ಮರ ತೆರವು ಮಾಡುತ್ತಿದ್ದಾರೆ.
ನಗರದಲ್ಲಿ ತಡರಾತ್ರಿ ಧಾರಾಕಾರ ಮಳೆಯಾಗಿದೆ. ನಿನ್ನೆ (ಅ.5) ಸಂಜೆ ಸುಮಾರು 1 ಗಂಟೆ ಕಾಲ ಮಳೆಯಾಗಿತ್ತು. ಬಳಿಕ ರಾತ್ರಿ 10 ಗಂಟೆಯ ನಂತರ ಮತ್ತೆ ನಗರದ ಹಲವೆಡೆ ಭಾರೀ ಮಳೆ(Rain) ಸುರಿದಿದೆ. ರಾತ್ರಿ ಸತತ 4 ಗಂಟೆಗಳ ಕಾಲ ಅಬ್ಬರಿಸಿದ ವರುಣನ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಅಬ್ಬರ: ರಸ್ತೆಗಳು ಜಲಾವೃತ, ಸಂಜೆ ಹೊತ್ತಲ್ಲಿ ಟ್ರಾಫಿಕ್ ಜಾಮ್

