– ಪರಮೇಶ್ವರ್ ನಾಯ್ಕ್, ಅಜೇಯ ಸಿಂಗ್, ಪ್ರಸಾದ ಅಬ್ಬಯ್ಯ ಕಾವೇರಿ ನಿವಾಸಕ್ಕೆ ಭೇಟಿ
ಬೆಂಗಳೂರು/ರಾಯಚೂರು: ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ ಶಾಸಕರು ಮಂತ್ರಿಗಿರಿಗೆ ಲಾಬಿ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್, ಜೇವರ್ಗಿಯ ಅಜೇಯ ಸಿಂಗ್ ಹಾಗೂ ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಅವರು ಭೇಟಿ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಸಿಎಂ ಮೂಲಕ ಮಂತ್ರಿಗಿರಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಲಾಬಿಗೆ ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
Advertisement
ಇತ್ತೀಚೆಗೆ ಬಾಗಲಕೋಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ಯಾವುದೇ ಶಾಸಕರು ಅಸಮಾಧಾನಗೊಂಡಿಲ್ಲ. ಅಲ್ಲದೇ ಸಂಪುಟ ವಿಸ್ತರಣೆಯಲ್ಲಿ ಬಾಗಲಕೋಟೆ ನಾಯಕರಿಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದ ಪರೋಕ್ಷವಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟಿದ್ದರು.
Advertisement
ಮಂತ್ರಿಗಿರಿಯಿಂದ ಎಂ.ಬಿ.ಪಾಟೀಲ್ ಅವರನ್ನು ಕೈಬಿಟ್ಟರೆ ನಮಗೆ ಅವಕಾಶ ಸಿಗಬಹುದು ಎನ್ನುವ ಲೆಕ್ಕಾಚಾರ ಉಳಿದ ಶಾಸಕರಲ್ಲಿ ಮೂಡಿದೆ. ಇದರಿಂದಾಗಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಸಚಿವ ಸ್ಥಾನಕ್ಕೆ ಏರುವ ತವಕದಲ್ಲಿ ಅನೇಕ ನಾಯಕರು ಮುಂದಾಗುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬಿ.ಸಿ.ಪಾಟೀಲ್ ಹಾಗೂ ಎಂ.ಬಿ.ಪಾಟೀಲ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು.
Advertisement
ನಾನು ಆಕಾಂಕ್ಷಿ:
ಸಂಪುಟ ವಿಸ್ತರಣೆಯಲ್ಲಿ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದು, ನನಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ಮಾನ್ವಿಯ ಜೆಡಿಎಸ್ ಶಾಸಕ ವೆಂಕಟಪ್ಪ ನಾಯಕ್ ಹೇಳಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ವಾಲ್ಮಿಕಿ ನಾಯಕ ಸಮಾಜದಿಂದ ನಾನೊಬ್ಬನೇ ಗೆದ್ದಿರುವುದು. ಹೀಗಾಗಿ ನನಗೆ ಸಚಿವ ಸ್ಥಾನ ನೀಡುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಎರಡು ಸಚಿವ ಸ್ಥಾನಗಳಲ್ಲಿ ಈಗಾಗಲೇ ಒಂದು ಸ್ಥಾನವನ್ನು ಅಲ್ಪಸಂಖ್ಯಾತ ಶಾಸಕರಿಗೆಂದು ನಿರ್ಧರಿಸಲಾಗಿದೆ. ಎನ್.ಮಹೇಶ್ ರಾಜಿನಾಮೆಯಿಂದ ತೆರವಾದ ಸ್ಥಾನವನ್ನು ನನಗೆ ನೀಡಬೇಕು. ರಾಜ್ಯದ ನಾಯಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಲು ಮಂತ್ರಿಗಿರಿ ನನಗೇ ನೀಡಬೇಕು ಅಂತ ವೆಂಕಟಪ್ಪ ನಾಯಕ್ ಪಟ್ಟುಹಿಡಿದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv