– 10 ವರ್ಷಗಳ ಬಳಿಕ ಬಲೆಗೆ ಬಿದ್ದ ಕಿಂಗ್‍ಫಿನ್
ಬೆಂಗಳೂರು: 3.5 ಕೋಟಿ ರೂ. ಮೌಲ್ಯದ ರಕ್ತ ಚಂದನ ಕಳ್ಳ ಸಾಗಣೆ ಮಾಡುತ್ತಿದ್ದ 13 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್, ರಕ್ತ ಚಂದನ ಕಳ್ಳ ಸಾಗಣೆಯ ಕಿಂಗ್ ಫಿನ್ ರಶೀದ್ ಕಳೆದ ಹತ್ತು ವರ್ಷಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಆದರೆ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆರೋಪಿಗಳನ್ನು ಬಂಧಿಸಲು ಕಳೆದ ಎರಡು ತಿಂಗಳಿಂದ ಕಾರ್ಯಚರಣೆ ನಡೆಸಲಾಗಿದ್ದು, ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
Advertisement
Advertisement
ಬಂಧಿತರು ಅಂತರ್ ರಾಜ್ಯ ಕಳ್ಳರಾಗಿದ್ದಾರೆ. ರಶೀದ್ ಅಂಡ್ ಟೀಂ ರಕ್ತ ಚಂದನವನ್ನು ಚೆನ್ನೈ ಹಾಗೂ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರು. ಈ ಜಾಲವನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿದ್ದೇವೆ. ಆರೋಪಿಗಳಿಂದ 3.5 ಕೋಟಿ ರೂ. ಮೌಲ್ಯದ 4 ಸಾವಿರ ಕೆಜಿ ರಕ್ತಚಂದನ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
Advertisement
ಸಿಸಿಬಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚಣೆ ನಡೆಸಿದ್ದಾರೆ. ಹೀಗಾಗಿ ಅವರಿಗೆ 2 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
Advertisement
ಇದೇ ವೇಳೆ ಮಾತನಾಡಿದ ಸಿಸಿಬಿ ಪೊಲೀಸ್ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಅವರು, ರಶೀದ್ ಮೇಲೆ ವಿವಿಧ ಪ್ರಕರಣ ದಾಖಲಾಗಿವೆ. ರಶೀದ್ ಮುಂಬೈ, ಚೆನ್ನೈಗೆ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ. ಈ ತಂಡದ ಮತ್ತೊಬ್ಬ ಪ್ರಮುಖ ಆರೋಪಿ ಜುಬೇರ್ ಮೂಲತಃ ಕಟ್ಟಿಗೇನ ಹಳ್ಳಿಯ ನಿವಾಸಿಯಾಗಿದ್ದು, ಎಚ್‍ಎಎಲ್‍ನಲ್ಲಿ ವಾಸಿಸುತ್ತಿದ್ದಾನೆ. ಹುಸ್ಕೂರ್ ಗೇಟ್ ಬಳಿ ಎರಡು ಗೋದಾಮು ನಿರ್ಮಾಣ ಮಾಡಿದ್ದು, ಅಲ್ಲಿ ಅಕ್ರಮವಾಗಿ ರಕ್ತ ಚಂದನವನ್ನು ಸಂಗ್ರಹಿಸುತ್ತಿದ್ದ ಎಂದು ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ನೆರೆಯ ರಾಜ್ಯದಲ್ಲಿ ಪರಿಶೀಲನೆ ನಡೆಸಲಾಗುತ್ತಿತ್ತು. ಇದರಿಂದಾಗಿ ಆರೋಪಿಗಳು ರಕ್ತ ಚಂದನ ಸಾಗಣೆ ಮಾಡುವುದನ್ನು ನಿಲ್ಲಿಸಿದ್ದರು. ಈ ಮೂಲಕ ಬೇರೆ ಬೇರೆ ಜಾಗ, ಗೋದಾಮುಗಳಲ್ಲಿ ಭಾರೀ ಪ್ರಮಾಣದ ರಕ್ತ ಚಂದನ ಸಿಕ್ಕಿದೆ ಎಂದು ತಿಳಿಸಿದರು.
ಆರೋಪಿಗಳು ಈಗಾಗಲೇ ಚೆನ್ನೈ, ಮುಂಬೈ ಹಾಗೂ ಆಂಧ್ರಪ್ರದೇಶಕ್ಕೆ ಸ್ವಲ್ಪ ಪ್ರಮಾಣದ ರಕ್ತ ಚಂದನವನ್ನು ಸಾಗಿಸಿದ್ದಾರೆ. ಹೀಗಾಗಿ ಅಲ್ಲಿನ ಅಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸಿ, ಅದನ್ನು ಮರಳಿ ತರಲಾಗುತ್ತದೆ ಎಂದರು.