ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರ ಅಹವಾಲುಗಳ ವಿಚಾರಣೆ ನಡೆಸುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಕ್ಯಾಟ್) ಪ್ರಕರಣಗಳ ವಿಲೇವಾರಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ ಎಂದು ಬೆಂಗಳೂರು ಪೀಠದ ನ್ಯಾಯಾಂಗ ಸದಸ್ಯ ಹಾಗೂ ಇಲಾಖಾ ಮುಖ್ಯಸ್ಥ ಡಾ. ಕೆ.ಬಿ ಸುರೇಶ್ ಹೇಳಿದ್ದಾರೆ.
ಬೆಂಗಳೂರು ಪೀಠದಲ್ಲಿ ತ್ವರಿತ ಗತಿಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಬಾಕಿ ಪ್ರಕರಣಗಳ ಸಂಖ್ಯೆ ಅತ್ಯಲ್ಪವಾಗಿದೆ. ಬಹುತೇಕ ಪ್ರಕರಣಗಳನ್ನು ದಾಖಲಾದ 4-5 ತಿಂಗಳಲ್ಲಿಯೇ ಇತ್ಯರ್ಥ ಮಾಡಲಾಗುತ್ತಿದೆ. ಕೆಲವು ಪ್ರಕರಣಗಳನ್ನು ಕೇವಲ 1-2 ವಾರದಲ್ಲಿ ವಿಲೇವಾರಿ ಮಾಡಿದ ಉದಾಹರಣೆಯೂ ಇದೆ ಎಂದರು.
Advertisement
ಸರ್ಕಾರಿ ಇಲಾಖೆಗಳಲ್ಲಿ ತಮ್ಮ ಸಿಬ್ಬಂದಿಗೆ ಕುಂದುಕೊರತೆಯ ಕನಿಷ್ಠ ನಿವಾರಣೆ ವ್ಯವಸ್ಥೆ ಇರಬೇಕು ಎಂದು ಅಭಿಪ್ರಾಯಪಟ್ಟ ಅವರು, ನೆಲದ ಕಾನೂನು ಎತ್ತಿ ಹಿಡಿಯುವುದರ ಜೊತೆಗೆ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸುವುದು ಆಡಳಿತಾತ್ಮಕ ನ್ಯಾಯಾಧಿಕರಣಗಳ ಜವಾಬ್ದಾರಿಯಾಗಿದೆ ಎಂದರು.
Advertisement
ನ್ಯಾಯದಾನ ವಿಳಂಬವಾದರೆ ಅರ್ಜಿದಾರನಷ್ಟೇ ಅಲ್ಲದೆ ಅವರ ಕುಟುಂಬವೂ ಸಂಕಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಪ್ರಕ್ರಿಯೆಗಳ ಹೊರತಾಗಿ ಕೇವಲ ಪತ್ರ ಮುಖೇನ ತಮ್ಮ ಅಹವಾಲು ತೋಡಿಕೊಂಡ ಸರ್ಕಾರಿ ನೌಕರರಿಗೂ ನ್ಯಾಯ ದೊರಕಿಸಲಾಗಿದೆ. ಅರ್ಜಿದಾರರಿಗೆ ಸ್ವಯಂ ತಮ್ಮ ಪ್ರಕರಣ ವಾದ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಮಾನವೀಯ ನೆಲೆಗಟ್ಟಿನಲ್ಲಿ ಹಾಗೂ ನೆಲದ ಕಾನೂನಿಗೂ ಚ್ಯುತಿಯಾಗದ ರೀತಿಯಲ್ಲಿ ನ್ಯಾಯದಾನ ಮಾಡಿದ ಪ್ರಕರಣಗಳ ಉದಾಹರಣೆ ನೀಡಿದರು.
Advertisement
ಸುದ್ದಿಗೋಷ್ಠಿಯಲ್ಲಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಸದಸ್ಯ ಸಿ.ವಿ ಶಂಕರ್ ಮತ್ತು ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಂ. ನಾಗೇಂದ್ರ ಸ್ವಾಮಿ ಉಪಸ್ಥಿತರಿದ್ದರು.
Advertisement