ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಗೆ ಪತ್ರ – ಪರಮೇಶ್ವರ್ ಸ್ಪಷ್ಟನೆ

Public TV
1 Min Read
Parameshwara 2 1

ಬೆಂಗಳೂರು: ಆಡಳಿತಾತ್ಮಕ ದೃಷ್ಟಿಯಿಂದ ಪ್ರತ್ಯೇಕ ಮಧುಗಿರಿ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು ಆಡಳಿತಾತ್ಮಕ ದೃಷ್ಟಿಯಿಂದ ಮಧುಗಿರಿಯನ್ನ ತುಮಕೂರು ಜಿಲ್ಲೆಯಿಂದ ಪ್ರತ್ಯೇಕ ಜಿಲ್ಲೆ ಮಾಡಿ ಅಂತ ಪತ್ರ ಬರೆದಿದ್ದೇನೆ. ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಜಿಲ್ಲೆಗಳ ರೀತಿ ಪ್ರತ್ಯೇಕ ಮಾಡುವಂತೆ ಮನವಿ ಮಾಡಿದ್ದೇನೆ. ಪಾವಗಡದಿಂದ ತುಮಕೂರಿಗೆ ಬರಲು ದೂರವಾಗುತ್ತದೆ. ಈಗಾಗಲೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯಾಗಿದೆ. ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡುವುದಾದರೆ ನಮ್ಮ ಜಿಲ್ಲೆಯನ್ನು ಪರಿಗಣಿಸಿ ಎಂದು ಮನವಿ ಮಾಡಿದ್ದೇನೆ ಎಂದರು.

siddaramaiah 2

ಯಾವುದೇ ರಾಜಕೀಯ ದುರುದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಲವು ತಾಲೂಕುಗಳನ್ನು ಮಾಡಿದ್ವಿ. ಹೊಸಬರು ಬಂದಾಗ ಹೊಸ ತಾಲೂಕುಗಳ ಸಂಖ್ಯೆ ಜಾಸ್ತಿ ಮಾಡೋದು ಜಿಲ್ಲೆಗಳನ್ನು ಮಾಡೋದು ಸಾಮಾನ್ಯವಾಗಿದೆ. ಸರ್ಕಾರ ಎಲ್ಲವನ್ನೂ ನೋಡಿ ಮಾಡುತ್ತೆ. ನಾನು ಡಿಸಿಎಂ ಆಗಿದ್ದಾಗ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿ ಬಂದಿರಲಿಲ್ಲ. ಬಂದಿದರೆ ಅವತ್ತೆ ಕ್ಯಾಬಿನೆಟ್ ತೀರ್ಮಾನ ಮಾಡುತ್ತಿದ್ದೇವು ಎಂದು ತಿಳಿಸಿದರು.

ವಿಜಯನಗರ ಜಿಲ್ಲೆ ಮಾಡಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೇರೆ ಜಿಲ್ಲೆಗಳ ಬಗ್ಗೆ ಮಾತನಾಡುವುದಿಲ್ಲ. ಸ್ಥಳೀಯ ಶಾಸಕರು, ಸಂಸದರು ಆ ಬಗ್ಗೆ ತೀರ್ಮಾನ ಮಾಡ್ತಾರೆ. ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಪ್ರತ್ಯೇಕ ಜಿಲ್ಲೆ ಕೇಳುತ್ತಾರೆ. ಜಿಲ್ಲೆ ಮತ್ತು ತಾಲೂಕು ಮಾಡಿದರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕೆಲಸ ಎಂದು ಹೇಳಿದರು.

pm modi 1

ನೆರೆಗೆ ಪರಿಹಾರ ಕೊಡದ ಪ್ರಧಾನಿ ಮೋದಿ ವಿರುದ್ಧ ಮಾಜಿ ಡಿಸಿಎಂ ಪರಮೇಶ್ವರ್ ಕಿಡಿಕಾರಿದ್ದಾರೆ. ಮೋದಿ ಮತ್ತು ಅಮಿತ್ ಶಾ ಯಾಕೆ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕಿತ್ತು. ಯಡಿಯೂರಪ್ಪ ಮಾತಿಗೂ ಅವರು ಗೌರವ ಕೊಡ್ತಿಲ್ಲ. ಬಿಜೆಪಿ ಅವರನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನಿಸುತ್ತೆ ಅಂತ ಲೇವಡಿ ಮಾಡಿದ್ರು. ರಾಜ್ಯದಲ್ಲಿ ನೆರೆ ಇದ್ದು, ಸೂಕ್ತ ಪರಿಹಾರವನ್ನ ಕೇಂದ್ರ ಇದೂವರೆಗೂ ನೀಡಿಲ್ಲ. ಆದರೆ ಬಿಹಾರಕ್ಕೆ ಪರಿಹಾರ ನೀಡ್ತಾರೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *