– ಶೀಘ್ರವೇ 100 ಎನ್‍ಸಿಡಿ ಕ್ಲಿನಿಕ್‍ಗಳ ಪ್ರಾರಂಭ
ಬೆಂಗಳೂರು: ಬದಲಾದ ಜೀವನಶೈಲಿ, ಮಾಲಿನ್ಯ, ಆಹಾರ ಕ್ರಮ ಸೇರಿದಂತೆ ವಿವಿಧ ಕಾರಣಗಳಿಂದ ಸಾಂಕ್ರಾಮಿಕವಲ್ಲದ ರೋಗಗಳಿಗೆ ಒಳಪಡುವವರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಹೊಸದಾಗಿ 100 ಎನ್‍ಸಿಡಿ (ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ) ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಗುತ್ತಿದೆ.
ಸಾಮಾನ್ಯ ಕ್ಲಿನಿಕ್‍ಗಳಿಗಿಂತ ವಿಶಿಷ್ಟವಾಗಿರುವ ಎನ್‍ಸಿಡಿ ಕ್ಲಿನಿಕ್‍ನಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ರಾಜ್ಯದಲ್ಲಿ 2010 ಮತ್ತು 11ನೇ ಸಾಲಿನಲ್ಲಿ ಕೋಲಾರ ಮತ್ತು ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಎನ್‍ಸಿಡಿ ಕ್ಲಿನಿಕ್‍ಗಳನ್ನು ಪ್ರಾರಂಭಿಸಲಾಯಿತು. ಹಂತ ಹಂತವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲು ಮುಂದಾಗುತ್ತಿದೆ.
ತಾಲೂಕುಗಳಲ್ಲಿಯೂ 200ಕ್ಕೂ ಅಧಿಕ ಎನ್‍ಸಿಡಿ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆಗೆ ಸಹಕಾರಿಯಾಗಿದೆ. ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್, ಹೃದಯ ಕಾಯಿಲೆಗಳಿಗೆ ಪ್ರತಿ ವರ್ಷ ಲಕ್ಷಾಂತರ ಮಂದಿ ಈ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ ತಾಲೂಕಿನಲ್ಲಿಯೂ ಈ ಸೇವೆಯನ್ನು ವಿಸ್ತರಿಸಿ, ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ಯಲು ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ ವರ್ಷ 31.33 ಲಕ್ಷ ಮಂದಿ ಎನ್‍ಸಿಡಿ ಕ್ಲಿನಿಕ್‍ಗಳಿಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 18 ಲಕ್ಷದಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. 3,944 ಮಂದಿಗೆ ತೃತೀಯ ಹಂತದ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ.
ಮರಣ ತಡೆಗೆ ಸಹಾಯಕ: 20ನೇ ಶತಾಮಾನದಲ್ಲಿ ಸಾಂಕ್ರಾಮಿಕ ರೋಗ ತಾಂಡವವಾಡಿದರೆ, 21ನೇ ಶತಮಾನದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆ ನೀಡಿದಲ್ಲಿ ರೋಗದಿಂದ ಸಾಯುವವರ ಸಂಖ್ಯೆ ತಡೆಯಲು ಸಾಧ್ಯ. ಆದ್ದರಿಂದ ರಾಜ್ಯದ ಎಲ್ಲೆಡೆ ಕೇಂದ್ರಗಳನ್ನು ಆರಂಭಿಸುವುದು ನಮ್ಮ ಉದ್ದೇಶ. ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪನಿರ್ದೇಶಕ ಡಾ. ರಂಗಸ್ವಾಮಿ ಮಾಹಿತಿ ನೀಡಿದರು.
ಜಾಗೃತಿ ಕೊರತೆಯಿಂದಾಗಿ ಬಹುತೇಕರು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಬದುಕುಳಿಯುವ ಅವಕಾಶಗಳು ಕಡಿಮೆ ಇರುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆಗಳ ಲಕ್ಷಣವನ್ನು ಆರಂಭಿಕ ಹಂತದಲ್ಲಿಯೇ ಮನಗಂಡು ಅಥವಾ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ರಂಗಸ್ವಾಮಿ ಹೇಳಿದರು.
ಪ್ರತಿ ಕೇಂದ್ರದಲ್ಲಿಯೂ ಮೂವರು ತಜ್ಞ ವೈದ್ಯರು, ದಾದಿಯರು ಸೇರಿ 10 ಮಂದಿ ಸಿಬ್ಬಂದಿ ಇರಬೇಕು. ಆದರೆ ಬಹುತೇಕ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಕ್ಲಿನಿಕ್‍ಗಳಿಗೆ ಬರುವರಿಗೆ ಸೇವೆ ವಿಳಂಬವಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.