ಭೂಸ್ವಾಧೀನ ಮಾಡಿಕೊಂಡ ಜಮೀನು ಮಾರುಕಟ್ಟೆ ದರದಲ್ಲಿ ಖರೀದಿಸಲು ರೈತರರಿಂದ ಸಚಿವ ಮುರುಗೇಶ್ ನಿರಾಣಿಗೆ ಒತ್ತಾಯ

Public TV
2 Min Read
MURUGESH NIRANI

ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗೆ ಭೂಸ್ವಾಧೀನ ಮಾಡಿಕೊಂಡಿರುವ ಜಮೀನನ್ನು ಮಾರುಕಟ್ಟೆ ದರದಲ್ಲಿ ಖರೀದಿ ಮಾಡಬೇಕು ಎಂದು ಸಾವಿರಾರು ರೈತರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಗುರುವಾರ ದೇವನಹಳ್ಳಿಯ ಸಾವಿರಾರು ರೈತರ ನಿಯೋಗವು ಮುಖಂಡ ಪ್ರಕಾಶ್ ನೇತೃತ್ವದಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಕಚೇರಿ ಬಳಿ ತಮ್ಮ ಜಮೀನನ್ನು ಖರೀದಿ ಮಾಡುವಂತೆ ಪ್ರತಿಭಟನೆ ನಡೆಸಲು ಮುಂದಾದರು.

ಇದಕ್ಕೆ ತಕ್ಷಣವೇ ಸ್ಪಂದಿಸಿ ರೈತ ನಿಯೋಗವನ್ನು ಖುದ್ದು ಭೇಟಿ ಮಾಡಿದ ಸಚಿವ ನಿರಾಣಿ ಅವರು, ಕೈಗಾರಿಕಾ ಉದ್ದೇಶಗಳಿಗಾಗಿ ಭೂಸ್ವಾಧೀನ ಮಾಡಿಕೊಂಡಿರುವ ಜಮೀನನ್ನು ಸರ್ಕಾರ ಯೋಗ್ಯ ಬೆಲೆಯಲ್ಲಿ ಖರೀದಿಸಲು ಸಿದ್ದವಿದೆ. ನಿಮಗೆ ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲ ಎಂದು ನಿಯೋಗಕ್ಕೆ ಆಶ್ವಾಸನೆ ನೀಡಿದರು.

ನಾವು ನಮ್ಮ ಜಮೀನು ಬಿಟ್ಟುಕೊಡಲು ಸಿದ್ದರಿದ್ದೇವೆ. ಬೆರಳಿಣಿಕೆಯ ರೈತರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾರುಕಟ್ಟೆ ದರದಂತೆ ಜಮೀನನ್ನು ಖರೀದಿ ಮಾಡುವಂತೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಮೋದಿಗೆ ನಾಯಿ ಸಾವು ಬರುತ್ತೆ ಎಂದಿದ್ದ ಕಾಂಗ್ರೆಸ್ ಮುಖಂಡ ಶೇಖ್ ಹುಸೇನ್ ಬಂಧನ

murugesh nirani

ದೇವನಹಳ್ಳಿಯಲ್ಲಿ 4 ಸಾವಿರ ಎಕರೆ ಜಮೀನು ಕೈಗಾರಿಕೆಗಳ ಸ್ಥಾಪನೆಗೆ ಮೀಸಲಿಡಲಾಗಿತ್ತು. ಇದರಲ್ಲಿ ಹಾರ್ಡ್‍ವೇರ್, ಏರೋಸ್ಪೇಸ್ ಸೇರಿದಂತೆ ವಿವಿಧ ರೀತಿಯ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದ್ದೇವೆ, ಜಮೀನು ನೀಡಿದ ರೈತರಿಗೆ ಯೋಗ್ಯವಾದ ಬೆಲೆ ಕೊಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಸ್ಥಳೀಯರಿಗೆ ಉದ್ಯೋಗ ಕೊಡಲು ನಾವು ಬದ್ಧರಾಗಿದ್ದೇವೆ. ಎಲ್ಲೆಲ್ಲಿ ಈ ರೀತಿಯ ಸಮಸ್ಯೆಗಳಿವೆಯೋ ಅಲ್ಲಿ ಸಂಬಂಧಪಟ್ಟ ರೈತ ಮುಖಂಡರ ಜೊತೆ ನಾನೇ ಖುದ್ದು ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇನೆ. ಯಾವುದೇ ಕಾರಣಕ್ಕೂ ಜಮೀನು ನೀಡಿದ ರೈತರು ಆತಂಕಕ್ಕೆ ಒಳಗಾಗಬಾರದು. ನಿಮ್ಮ ಹಿತಾಸಕ್ತಿಯನ್ನು ಕಾಪಾಡಲು ನಾವು ಬದ್ಧವಾಗಿದ್ದೇವೆ ಎಂದು ನಿರಾಣಿ ಅವರು ರೈತ ನಿಯೋಗಕ್ಕೆ ಆಭಯ ನೀಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ನಿರಾಣಿ, ಅವರು,ಆರ್ಥಿಕವಾಗಿ ಹಿಂದುಳಿದ ಸಮುದಾಯ(ಇಡಬ್ಲ್ಯುಎಸ್) ದವರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬಂದರೆ 2 ಎಕರೆವರೆಗೂ ಜಮೀನನ್ನು ರಿಯಾಯಿತಿ ದರದಲ್ಲಿ ನೀಡಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಈಗಾಗಲೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ಕೈಗಾರಿಕೆಗಳನ್ನು ಪ್ರಾರಂಭಿಸಿದರೆ ಅಂತಹವರಿಗೆ ಸರ್ಕಾರದ ವತಿಯಿಂದ ಶೇ. 75ರಷ್ಟು ರಿಯಾಯಿತಿ ನೀಡಿ ಜಮೀನು ನೀಡಲಾಗುತ್ತದೆ. ಉಳಿದ ಶೇ. 25 ರಷ್ಟು ಹಣವನ್ನು ಹಂತ ಹಂತವಾಗಿ ಕಟ್ಟಲು ಅನುವು ಮಾಡಿಕೊಡಲಾಗಿದೆ ಎಂದು ಹೇಳಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *