ಬೆಂಗಳೂರು: ನಮ್ಮಿಬ್ಬರ ಲವ್ ಬ್ರೇಕ್ ಅಪ್ ಆಗಲು ನೀನೇ ಕಾರಣ ಎಂದು ಕೋಪಗೊಂಡ ಯುವಕನೊಬ್ಬ ಸ್ನೇಹಿತನಿಗೆ ಲಾಂಗ್‍ನಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪಿಯಲ್ಲಿ ನಡೆದಿದೆ.
ಪ್ರಶಾಂತ್ ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಆರೋಪಿ. ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಪ್ರಶಾಂತ್, ಕಳೆದ ಒಂದು ವರ್ಷಗಳಿಂದ ಪರಿಚಯದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಯುವತಿಯೂ ಪ್ರಶಾಂತ್‍ನನ್ನು ಪ್ರೀತಿ ಮಾಡುತ್ತಿದ್ದ ಕಾರಣ ಇಬ್ಬರೂ ಪಾರ್ಕ್, ಸಿನಿಮಾ, ಮದುವೆ ಕನಸ ಕಂಡಿದ್ದರು.
ಈ ನಡುವೆ ಇಬ್ಬರ ನಡುವೆ ಪ್ರಶಾಂತ್ ಸ್ನೇಹಿತ ಲೋಕೇಶ್ ಎಂಟ್ರಿಯಾಗಿದ್ದ. ಅಲ್ಲದೇ ಪ್ರಶಾಂತ್ ರೌಡಿಸಂ, ಪುಂಡಾಟಗಳ ಬಗ್ಗೆ ಯುವತಿಯ ಬಳಿ ಹೇಳಿದ್ದ. ಲೋಕೇಶ್ ಮಾತು ಕೇಳಿದ ಯುವತಿ ಪ್ರಶಾಂತ್‍ನನ್ನು ಬಿಟ್ಟು ದೂರವಾಗಿದ್ದಳು. ಇದರಿಂದ ನೊಂದ ಪ್ರಶಾಂತ್, ನನ್ನ ಲವ್ ಫೈಲ್ಯೂರ್ ಆಗಲು ಸ್ನೇಹಿತ ಲೋಕೇಶ್ ಕಾರಣ ಎಂದು ಧ್ವೇಷ ಬೆಳೆಸಿಕೊಂಡಿದ್ದ. ಇದೇ ಕೋಪದಲ್ಲಿ ಲೋಕೇಶ್ ಕುಡಿದ ಮತ್ತಿನಲ್ಲಿ ಮಲಗಿದ್ದ ಸ್ನೇಹಿತನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದ.
ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಲೋಕೇಶ್ ಪ್ರಜ್ಞೆ ಕಳೆದುಕೊಂಡಿದ್ದ. ಇದನ್ನ ಕಂಡ ಪ್ರಶಾಂತ್, ಲೋಕೇಶ್ ಸಾವನ್ನಪ್ಪಿದ್ದಾನೆ ಎಂದು ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋ ಲೇಔಟ್ ಪೊಲೀಸರು ಆರೋಪಿ ಪ್ರಶಾಂತ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.