ಬೆಂಗಳೂರು: ಪಿಜಿ ಮುಂದೆ ನಿಂತಿದ್ದ ಯುವತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ನಗರದ ಮಾರತ್‍ಹಳ್ಳಿಯ ಮುನೇಕೊಳಲು ಸಮೀಪದ ಮಂಜುನಾಥ ಲೇಔಟ್‍ನಲ್ಲಿ ನಡೆದಿದೆ.
ಶುಭಶ್ರೀ ಪ್ರಿಯದರ್ಶಿನಿ (25) ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿ. ಒಡಿಶಾ ಮೂಲದ ಶುಭಶ್ರೀ ಪ್ರಿಯದರ್ಶಿನಿ ಮಂಜುನಾಥ ಲೇಔಟ್‍ನ ವಸುಂದರ ಲೇಡಿಸ್ ಪಿಜಿಯಲ್ಲಿ ವಾಸವಿದ್ದರು. ಯುವತಿಯ ಪ್ರಿಯಕರನೇ ಈ ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಶುಭಶ್ರೀ ಕಳೆದ 2 ವರ್ಷಗಳಿಂದ ನಿಮ್ಹಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿಗೋ ಹೋಗುವುದಕ್ಕಾಗಿ ಇಂದು ಸಂಜೆ ವಸುಂದರ ಲೇಡಿಸ್ ಪಿಜಿ ಮುಂದೆ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಆಕೆಯ ಪ್ರಿಯಕರ ಕಂಟ್ರಿಮೇಡ್ ಪಿಸ್ತೂಲ್‍ನಿಂದ ಫೈರಿಂಗ್ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶುಭಶ್ರೀ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾರತ್‍ಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಭಶ್ರೀ ಪ್ರಿಯಕರನೇ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.