ಮಕ್ಕಳ ನಿದ್ರೆಗೆ ಭಂಗ – ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಎರಡು ಪಾಳಿಗೆ ಪೋಷಕರ ಆಕ್ಷೇಪ

Public TV
2 Min Read
Kendriya Vidyalaya 3

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಎರಡನೇ ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅನುಮತಿಯನ್ನು ನೀಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವರ್ಷದವರೆಗೆ ಬೆಳಗ್ಗೆ 8.30ಕ್ಕೆ ಆರಂಭಗೊಂಡು ಮಧ್ಯಾಹ್ನ 2.40 ರವರೆಗೆ ತರಗತಿಗಳು ನಡೆಯುತಿತ್ತು. ಆದರೆ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಎರಡು ಪಾಳಿಯಲ್ಲಿ ತರಗತಿಗಳು ನಡೆಯುತ್ತಿದೆ. ಮೊದಲ ಪಾಳಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ನಡೆದರೆ 12.30 ರಿಂದ ಸಂಜೆ 6 ಗಂಟೆಯವರೆಗೂ ಎರಡನೇ ಪಾಳಿ ನಡೆಯುತ್ತಿದೆ.

ಕರ್ನಾಟಕದಲ್ಲಿ ಒಟ್ಟು 48 ಕೇಂದ್ರೀಯ ವಿದ್ಯಾಲಯಗಳಿದ್ದು, ಇವುಗಳ ಪೈಕಿ ಮಲ್ಲೇಶ್ವರಂನಲ್ಲಿ ಮಾತ್ರ ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿದೆ. ದೇಶದ ಪೈಕಿ ಮಹಾರಾಷ್ಟ್ರ ಅಜನಿ ನಾಗ್ಪುರ್, ಭಂಡಪ್ ಮತ್ತು ದೆಹಲಿಯಲ್ಲಿರುವ ವಸಂತ್ ಕುಂಜ್‍ನಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಈ ವಿಶೇಷ ಬದಲಾವಣೆ ಮಾಡಲಾಗಿದೆ.

ಪೋಷಕರ ಆಕ್ಷೇಪ ಯಾಕೆ?
ಶಾಲೆಯ ಸಮಯವನ್ನು ಬದಲಾವಣೆ ಮಾಡಿರುವ ಕುರಿತು ಕೆಲ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ 7 ಗಂಟೆಗೆ ಶಾಲೆಗೆ ಆಗಮಿಸುವುದು ಕಷ್ಟಸಾಧ್ಯ. 7 ಗಂಟೆಗೆ ಶಾಲೆಗೆ ಆಗಮಿಸಲು ವಿದ್ಯಾರ್ಥಿಗಳು 2 ಗಂಟೆ ಮುಂಚಿತವಾಗಿಯೇ ಏಳಬೇಕಾಗುತ್ತದೆ. ಇದರಿಂದಾಗಿ ತರಗತಿಯಲ್ಲಿ ವಿದ್ಯಾರ್ಥಿಗಳು ನಿದ್ದೆ ಮಾಡುತ್ತಾರೆ. ಅಲ್ಲದೇ ಪಠ್ಯದ ಬಗ್ಗೆ ಗಮನ ಹರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಬೆಳಗ್ಗೆ ನಿದ್ದೆ ಕಡಿಮೆಯಾದರೆ ಮಕ್ಕಳ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತದೆ ಎಂದು ಪೋಷಕರು ಹೇಳಿದ್ದಾರೆ.

ಸಮರ್ಥನೆ ಏನು?
ಕೇಂದ್ರೀಯ ವಿದ್ಯಾಲಯಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎರಡು ಅವಧಿಗಳಲ್ಲಿ ತರಗತಿ ನಡೆಸಲು ಅನುಮತಿ ನೀಡಲು ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. 2017-18 ರ ಶೈಕ್ಷಣಿಕ ವರ್ಷದಲ್ಲಿ 120 ಸೀಟ್ ಗಳ ಮೂರು ಸೆಕ್ಷನ್ ಗಳಿರುವ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು 3,040 ಅರ್ಜಿಗಳು ಸಲ್ಲಿಕೆಯಾಗಿತ್ತು.

ಸದ್ಯ ಶಾಲೆಯಲ್ಲಿ 1,836 ವಿದ್ಯಾರ್ಥಿಗಳು 1 ನೇ ತರಗತಿಯಿಂದ 12 ನೇ ತರಗತಿಯ ವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಕೆವಿ ಮಲ್ಲೇಶ್ವರಂ ಶಾಲೆಯಲ್ಲಿ ಮೂರು ಸೆಕ್ಷನ್ ಗಳಲ್ಲಿ ಬೆಳಗ್ಗೆ 8.30 ರಿಂದ ಮಧ್ಯಾಹ್ನ 2.40 ವರೆಗೂ ತರಗತಿಗಳು ನಡೆಯುತ್ತಿದೆ. ಸಚಿವಾಲಯದ ಅನುಮತಿಯಿಂದ ಶಾಲೆಯ 1 ರಿಂದ 8 ತರಗತಿಯ ವರೆಗೆ 640 ಸೀಟ್‍ಗಳು ಅಧಿಕವಾಗಿ ಲಭ್ಯವಾಗಿದೆ. ಅಲ್ಲದೇ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲ್ಲಿದ್ದು, ಈ ಕುರಿತು ಅರ್ಜಿಗಳನ್ನು ಆಹ್ವಾನಿಸುತ್ತೇವೆ ಎಂದು ಆಡಳಿತ ಮಂಡಳಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ಹೆಚ್ಚುವರಿಯಾಗಿ ಆರಂಭವಾಗುವ ತರಗತಿಗಳಿಗಾಗಿ ಪ್ರತ್ಯೇಕ ಸಿಬ್ಬಂದಿ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ಕೇಂದ್ರಿಯ ವಿದ್ಯಾಲಯಗಳ ಉಪಾಧ್ಯಕ್ಷ ದೇವಕುಮಾರ್ ತಿಳಿಸಿದ್ದಾರೆ.

Kendriya Vidyalaya 4

Share This Article
Leave a Comment

Leave a Reply

Your email address will not be published. Required fields are marked *